ನವದೆಹಲಿ : 2019ಕ್ಕೆ ಹೋಲಿಸಿದರೆ 2020ರಲ್ಲಿ ದೇಶದಲ್ಲಿ ಕೃಷಿ ಕಾರ್ಮಿಕರ ಆತ್ಮಹತ್ಯೆ ಪ್ರಕರಣಗಳ ಪ್ರಮಾಣ ಶೇ.17.08ರಷ್ಟು ಹೆಚ್ಚಳವಾಗಿವೆ.
ಕೃಷಿ ಕಾರ್ಮಿಕರ ಆತ್ಮಹತ್ಯೆ ಪ್ರಕರಣಗಳ ಹೆಚ್ಚಳದ ಬಗ್ಗೆ 2019 ಮತ್ತು 2020ರ ಎನ್‌ಸಿಆರ್‌ಬಿ ವರದಿಯನ್ನು ಉಲ್ಲೇಖಿಸಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ. 2019ರಲ್ಲಿ 4,324 ಕೃಷಿ ಕಾರ್ಮಿಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. 2020ರಲ್ಲಿ 5,098 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಟಿಆರ್‌ಎಸ್ ಸಂಸದ ಕೆ.ಆರ್.ಸುರೇಶ್ ರೆಡ್ಡಿ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು, ಕೃಷಿ ರಾಜ್ಯದ ವಿಷಯವಾಗಿರುವುದರಿಂದ ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಕೃಷಿ ಅಭಿವೃದ್ಧಿಗೆ ಪೂರಕವಾದ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತವೆ. ಹಲವಾರು ಯೋಜನೆಗಳ ಮೂಲಕ ರಾಜ್ಯ ಸರ್ಕಾರದ ಪ್ರಯತ್ನಗಳಿಗೆ ಕೇಂದ್ರ ಸರ್ಕಾರ ಪೂರಕವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಕೊರೊನಾ ರೂಪಾಂತರಿ 'ಒಮಿಕ್ರಾನ್' ಆಕ್ರಮಣಕಾರಿಯೇ?.. ವೈರಸ್ನಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು?
ಇತ್ತೀಚಿನ ಪ್ರಮುಖ ಯೋಜನೆಯಾದ 'ಆತ್ಮ ನಿರ್ಭರ್ ಭಾರತ್-ಕೃಷಿ ಪ್ಯಾಕೇಜ್' 1 ಲಕ್ಷ ಕೋಟಿ ರೂ. ಮೌಲ್ಯದ 'ಕೃಷಿ ಮೂಲಸೌಕರ್ಯ ನಿಧಿ' (AIF) ರಚನೆಯನ್ನು ಒಳಗೊಂಡಿದೆ. ಕೇಂದ್ರವು 10,000 ಕೋಟಿ ರೂ. ಮೌಲ್ಯದ ಸೂಕ್ಷ್ಮ ನೀರಾವರಿ ನಿಧಿಯನ್ನೂ ರಚಿಸಿದೆ ಎಂದು ಮಾಹಿತಿ ನೀಡಿದರು.