ಹೌರಾ(ಪಶ್ಚಿಮ ಬಂಗಾಳ): ಕರ್ನಾಟಕದ ನಂತರ ಈಗ ಪಶ್ಚಿಮ ಬಂಗಾಳದಲ್ಲಿ ಹಿಜಾಬ್ ಧರಿಸಿ ಶಾಲೆ ಬಂದಿದ್ದ ವಿದ್ಯಾರ್ಥಿಗಳ ವಿರೂದ್ದ ಆಕ್ರೋಶ ಭುಗಿಲೆದ್ದಿದೆ. ಧುಲಗೋರಿ ಆದರ್ಶ ವಿದ್ಯಾಲಯದ ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳ ಗುಂಪು ಹಿಜಾಬ್ ಧರಿಸಿ ಶಾಲೆಗೆ ಬರುತ್ತಿರುವವರಿಗೆ ವಿರೋಧ ವ್ಯಕ್ತಪಡಿಸಿದೆ. ಇನ್ನು ಈ ಘಟನೆಯಿಂದ ಶಾಲಾ ಆವರಣದಲ್ಲಿ ಅಶಾಂತಿ ಉಂಟಾಗಿದ್ದು, ಮಂಗಳವಾರ ನಡೆಯಬೇಕಿದ್ದ ಪರೀಕ್ಷೆಯನ್ನು ಅಧಿಕಾರಿಗಳು ರದ್ದುಗೊಳಿಸಿದ್ದಾರೆ.
ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದರೆ ಕೇಸರಿ ಸ್ಕಾರ್ಫ್ ಧರಿಸಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಇದರಿಂದ ಶಾಲೆಯ ಅಶಾಂತಿಗೆ ಕಾರಣವಾಯಿತು. ಈ ವಿಚಾರವಾಗಿ ಶಾಲಾ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ಪ್ರತಿಭಟನೆಯಿಂದ ಶಾಲಾ ಆಸ್ತಿ ಪಾಸ್ತಿಗೆ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ. ಕೊಡಲೇ ಶಾಲಾ ಅಧಿಕಾರಿಗಳು ಸಂಕ್ರೈಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು, ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಸೋಮವಾರ ಪರೀಕ್ಷೆಯ ನಂತರ ತುರ್ತು ಸಭೆ ನಡೆಸಿ ಶಾಲೆಯಲ್ಲಿ ಧಾರ್ಮಿಕ ವಸ್ತ್ರ ಧರಿಸುವುದನ್ನು ನಿಷೇಧಿಸಲಾಗಿದೆ ಎಂಬ ನಿರ್ಧಾರವನ್ನು ಶಾಲಾ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ ಎಂದು ಮುಖ್ಯೋಪಾಧ್ಯಾಯರು ಹೇಳಿದರು.
ಈ ಘಟನೆಯ ನಂತರ ಮತ್ತೆ ಐದು ವಿದ್ಯಾರ್ಥಿಗಳು ಮಂಗಳವಾರ ನಾಮಬಲಿ ಧರಿಸಿ ಶಾಲೆಗೆ ಬಂದಿದ್ದರು. ಇದನ್ನು ಇತರ ಸಮುದಾಯಗಳ ವಿದ್ಯಾರ್ಥಿಗಳು ಆಕ್ಷೇಪಿಸಿದರು. ಇದರಿಂದ ಮತ್ತೆ ಪ್ರಕ್ಷುಬ್ಧತೆಗೆ ಕಾರಣವಾಯಿತು. ಪರಿಸ್ಥಿತಿಯ ನಿಯಂತ್ರಿಸಲು ಹತ್ತು, ಹನ್ನೊಂದು ಮತ್ತು ಹನ್ನೆರಡನೇ ತರಗತಿಯ ಇತಿಹಾಸ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಶಾಲಾ ಆಡಳಿತ ತಿಳಿಸಿದೆ.
ಇದನ್ನೂ ಓದಿ:ಡಿಎ ಹೆಚ್ಚಳಕ್ಕೆ ಆಗ್ರಹಿಸಿ ಪಶ್ಚಿಮ ಬಂಗಾಳ ಸರ್ಕಾರಿ ನೌಕರರ ಪ್ರತಿಭಟನೆ.. VIDEO