ಶ್ರೀನಗರ: ಭಾರಿ ಮಳೆಯಿಂದಾಗಿ ಮೇಘಸ್ಫೋಟ ಉಂಟಾಗಿ 4 ದಿನಗಳಿಂದ ನಿಂತಿದ್ದ ಪವಿತ್ರ ಐತಿಹಾಸಿಕ ಅಮರನಾಥ ಯಾತ್ರೆ ಇಂದಿನಿಂದ ಪುನಾರಂಭವಾಗಿದೆ. ಮಳೆಯ ಪ್ರಮಾಣ ಸ್ವಲ್ಪ ತಗ್ಗಿದ್ದು, ಯಾತ್ರೆಯು ಇಲ್ಲಿನ ಗಂದೇರ್ಬಾಲ್ ಜಿಲ್ಲೆಯ ಬಲ್ಟಾಲ್ ಕಡೆಯಿಂದ ಮಂಗಳವಾರ ಮರು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲ್ಟಾಲ್ ಬೇಸ್ ಕ್ಯಾಂಪ್‌ನಿಂದ ಪವಿತ್ರ ಗುಹೆಯತ್ತ ತೆರಳಲು 7000 ಕ್ಕೂ ಹೆಚ್ಚು ಯಾತ್ರಿಕರು ಡುಮೈಲ್‌ನಿಂದ ಮುಂಜಾನೆ ಹೊರಟರು. ಯಾತ್ರಾರ್ಥಿಗ ಸುರಕ್ಷತೆಗೆ ಸೇನೆ ಹೆಚ್ಚಿನ ಗಮನ ವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.
ಮೇಘಸ್ಫೋಟಕ್ಕೆ 16 ಬಲಿ: ಕಳೆದ ಶುಕ್ರವಾರ ಅಮರನಾಥ ಗುಹೆ ದೇಗುಲದ ಪಕ್ಕದಲ್ಲಿ ಭಾರಿ ಮಳೆಯಿಂದಾಗಿ ಮೇಘಸ್ಫೋಟ ಸಂಭವಿಸಿತ್ತು. ಇದರಲ್ಲಿ ಕನಿಷ್ಠ 16 ಜನ ಯಾತ್ರಿಕರು ಸಾವನ್ನಪ್ಪಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ. ಅಲ್ಲದೇ ಇನ್ನೂ ಕೆಲ ಜನರು ಗಾಯಗೊಂಡಿದ್ದಾರೆ. ಬಳಿಕ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಪವಿತ್ರ ಗುಹೆಯ ಮಾರ್ಗವನ್ನು ತೆರವುಗೊಳಿಸಿದ ನಂತರ 4 ಸಾವಿರಕ್ಕೂ ಅಧಿಕ ಯಾತ್ರಿಕರ ಹೊಸ ತಂಡವು ಸೋಮವಾರ ಜಮ್ಮುವಿನ ಮೂಲ ಶಿಬಿರದಿಂದ ಪ್ರಯಾಣ ಆರಂಭಿಸಿದೆ. ಅಮರನಾಥ ಲಿಂಗ ಗುಹೆ ಮತ್ತು ಸುತ್ತಮುತ್ತಲಿನ ಪ್ರದೇಶದ ಇತ್ತೀಚಿನ ಎಲ್ಲಾ ಭಗ್ನಾವಶೇಷಗಳನ್ನು ತೆರವುಗೊಳಿಸಲಾಗಿದೆ. ಹೊಸ ಬ್ಯಾಚ್ನ ಯಾತ್ರಿಕರಿಗೆ ಸುರಕ್ಷಿತ ಮಾರ್ಗವನ್ನು ಸೇನೆ ಸಿದ್ಧಪಡಿಸಿದೆ.
ಸೇನೆಯಿಂದ ಮುಂಜಾಗ್ರತಾ ಕ್ರಮ: ಇದಾದ ಬಳಿಕ ಈಗ ಜಮ್ಮುವಿನ ಬಾಲ್ಟಾಲ್ ಬೇಸ್ ಕ್ಯಾಂಪ್‌ನಿಂದಲೂ 7 ಸಾವಿರ ಜನರ ಯಾತ್ರೆಗೆ ಅನುಮತಿಸಲಾಗಿದೆ. ಯೋಧರು ಯಾತ್ರೆಗಾಗಿ ಸುರಕ್ಷಿತ ಮಾರ್ಗಗಳನ್ನು ಸಿದ್ದಪಡಿಸಿದ್ದಾರೆ. ಹೆಲಿಕಾಪ್ಟರ್ ಮತ್ತು ತುರ್ತು ವಾಹನಗಳನ್ನು ಮುಂಜಾಗ್ರತಾ ಕ್ರಮವಾಗಿ ಸಿದ್ಧಪಡಿಸಿಕೊಂಡಿದೆ. ಮೂಲಗಳ ಪ್ರಕಾರ ಈವರೆಗೆ ಪವಿತ್ರ ಗುಹೆಗೆ 73,554 ಯಾತ್ರಿಕರು ಭೇಟಿ ನೀಡಿದ್ದಾರೆ.
ಓದಿ: ಗೋಕಾಕ್-ಶಿಂಗಳಾಪೂರ ಸೇತುವೆ ಮುಳುಗಡೆ; ಬ್ರಿಡ್ಜ್ ಮೇಲೆಯೇ ವಾಹನಗಳ ವಾಶಿಂಗ್, ಸಂಚಾರ!