ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ನಡೆದ ಹೂಡಿಕೆದಾರರ ಶೃಂಗಸಭೆ 3.0 ದಲ್ಲಿ ಭಾಗಿಯಾಗಿ ಅದಾನಿ ಗ್ರೂಪ್ನಿಂದ ಚೇರಮನ್ ಗೌತಮ್ ಅದಾನಿ ಮಾತನಾಡಿದರು. ಈ ವೇಳೆ ಬರೋಬ್ಬರಿ 70,000 ಕೋಟಿ ರೂಪಾಯಿ ಹೂಡಿಕೆ ಮಾಡಲು ನಿರ್ಧರಿಸಿದ್ದು, ಇದರಿಂದ ಬರೋಬ್ಬರಿ 30 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ ಎಂದರು.
ಉತ್ತರ ಪ್ರದೇಶದಲ್ಲಿ ಅದಾನಿ ಸಮೂಹ ಕಂಪನಿಗಳು ಬರೋಬ್ಬರಿ 70 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, ಇದರಿಂದ ರಾಜ್ಯದಲ್ಲಿ 30 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ. ಇದರಲ್ಲಿ 11 ಸಾವಿರ ಕೋಟಿ ರೂ. ಹಸಿರು ಶಕ್ತಿ, ನೀರು, ಕೃಷಿ, ಲಾಜಿಸ್ಟಿಕ್ಸ್ ಮತ್ತು ಡೇಟಾ ಸೆಂಟರ್ ವ್ಯವಹಾರದಲ್ಲಿ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದರು.
ರಸ್ತೆ ಮತ್ತು ಸಾರಿಗೆ ಮೂಲ ಸೌಕರ್ಯಕ್ಕಾಗಿ 24 ಸಾವಿರ ಕೋಟಿ ರೂ ಮತ್ತು ಬಹು ಮಾದರಿ ಲಾಜಿಸ್ಟಿಕ್ಸ್ ಮತ್ತು ರಕ್ಷಣಾ ವಲಯದಲ್ಲಿ 35 ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು. ಉತ್ತರ ಪ್ರದೇಶದ ಕಾನ್ಪುರದಲ್ಲಿ ದಕ್ಷಿಣ ಏಷ್ಯಾದ ಅತಿದೊಡ್ಡ ಯುದ್ಧ ಸಾಮಗ್ರಿ ಸಂಕೀರ್ಣ ಸ್ಥಾಪಿಸಲು ಅದಾನಿ ಗ್ರೂಪ್ ಪ್ರಕ್ರಿಯೆಯಲ್ಲಿದೆ ಎಂದು ಗೌತಮ್ ಅದಾನಿ ತಿಳಿಸಿದರು.
ಇದನ್ನೂ ಓದಿ: ತನ್ನನ್ನು ತಾನೇ ಮದುವೆಯಾಗಲಿರುವ ಯುವತಿಗೆ ವಿಘ್ನ.. ಸಮಾರಂಭಕ್ಕೆ ಅಡ್ಡಿ, ತೀವ್ರ ವಿರೋಧ
ತಮ್ಮ ಮಾತು ಮುಂದುವರೆಸಿದ ಅದಾನಿ, ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಭಾರತ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದು, ಹಿಂದಿನ ವೈಭವ ಮರುಸ್ಥಾಪಿಸಲಿದ್ದಾರೆ ಎಂದರು. ಅವರು ಗುಜರಾತ್ ಮುಖ್ಯಮಂತ್ರಿ ಆದ ದಿನದಿಂದಲೂ ಕೈಗಾರೀಕರಣ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದೀರಿ. ಹೀಗಾಗಿ, ಗುಜರಾತ್ ಮಾದರಿ ಎಲ್ಲೆಡೆ ಕೆಲಸ ಮಾಡುತ್ತಿದೆ ಎಂದರು. ಉತ್ತರ ಪ್ರದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ 1,046 ಯೋಜನೆಗಳಿಗೆ ಚಾಲನೆ ನೀಡಿದ್ದು, 80 ಸಾವಿರ ಕೋಟಿಗೂ ಅಧಿಕ ಮೊತ್ತದ ವೆಚ್ಚ ಇದಕ್ಕಾಗಿ ಖರ್ಚು ಮಾಡಲು ನಿರ್ಧರಿಸಲಾಗಿದೆ.
ಇದೇ ವೇಳೆ ಮಾತನಾಡಿದ ಆದಿತ್ಯ ಬಿರ್ಲಾ ಗ್ರೂಪ್ನ ಮುಖ್ಯಸ್ಥ ಕುಮಾರ್ ಮಂಗಲಂ ಬಿರ್ಲಾ, ಉತ್ತರ ಪ್ರದೇಶದಲ್ಲಿ 40 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾಗಿದ್ದು, ಇದರಿಂದ 35 ಸಾವಿರಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂಬ ಮಾಹಿತಿ ಹಂಚಿಕೊಂಡರು.