ನವದೆಹಲಿ: ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಸಂಸದೀಯ ಪದ ಬಳಕೆ ಮಾಡಿದ ಹಿನ್ನಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಬಾರಿ ಅವರ ವಿರುದ್ಧ ಕ್ರಮಕ್ಕೆ ಮುಂದಾಗಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಜೋಶಿ ಅವರು, ಪ್ರಧಾನ ಮಂತ್ರಿ ವಿರುದ್ಧ ಆಧಾರ ರಹಿತ ಆರೋಪ ಮಾಡಿದ ಹಿನ್ನೆಲೆ ನಶಿಕಾಂತ್ ದುವೆ ಅವರು ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅವರು ಸಂಸತ್ತಿನಲ್ಲಿ ಏನು ಹೇಳಿದ್ದಾರೋ ಅದಕ್ಕೆ ಸಾಕ್ಷಿ ಒದಗಿಸಬೇಕು. ಆದರೆ, ಇದುವರೆಗೆ ಯಾವುದೇ ಸಾಕ್ಷಿಯನ್ನು ಅವರು ಒದಗಿಸಿಲ್ಲ. ನಾವು ಈ ದೇಶದ ಜನರಿಗೆ ಉತ್ತರಿಸಬೇಕಾಗಿದೆ. ಈ ಹಿನ್ನಲೆ ಈ ಬಾರಿ ನೋಟಿಸ್ ಜಾರಿಯಾಗಿದ್ದು , ಕ್ರಮಕ್ಕೆ ಮುಂದಾಗುತ್ತೇವೆ ಎಂದಿದ್ದಾರೆ.
ದುಬೆ ಕಳುಹಿಸಿರುವ ಪತ್ರದಲ್ಲಿ ಏನಿದೆ?: ಫೆಬ್ರವರಿ 8ರಂದು ದುಬೆ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಕಳುಹಿಸಿದ್ದರು. ಈ ಪತ್ರದಲ್ಲಿ ಕಾಂಗ್ರೆಸ್ ಸಂಸದರು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಪ್ರಧಾನಿ ಹಾಗೂ ಸದನಕ್ಕೆ ಅವಹೇಳನಕಾರಿ, ಅಸಭ್ಯ, ಅಸಂಸದೀಯ, ಘನತೆಯಿಲ್ಲದಂತೆ ವರ್ತಿಸುತ್ತಿದ್ದಾರೆ. ಸದನದಲ್ಲಿ ಹೇಳಿಕೆ ನೀಡಿದ ರಾಹುಲ್ ಗಾಂಧಿ ಇದಕ್ಕೆ ಪೂರಕವಾದ ಯಾವುದೇ ಸಾಕ್ಷಿಯನ್ನು ಒದಗಿಸಿಲ್ಲ. ಅವರ ಹೇಳಿಕೆಯನ್ನು ಬೆಂಬಲಸುವ ಯಾವುದೇ ದಾಖಲಾತಿಗಳು ಕೂಡ ಇಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ಸಂಸದರು ಸರಿಯಾದ ಪುರಾವೆ ಇಲ್ಲದೇ ಸದನವನ್ನು ತಪ್ಪು ದಾರಿಗೆ ಎಳೆಯುವುದರ ಜೊತೆಗೆ ಅವರು ಪ್ರಧಾನಿ ಅವರ ವರ್ಚಸ್ಸಿಗೆ ಧಕ್ಕೆ ತರುವ ಯತ್ನ ನಡೆಸುತ್ತಿದ್ದಾರೆ. ಅವರ ಈ ವರ್ತನೆ ಸದನ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸದನದ ಅವಹೇಳನ ನಡೆಸುತ್ತಿರುವ ಹಿನ್ನಲೆ ರಾಹುಲ್ ಗಾಂಧಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ದುಬೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ರಾಹುಲ್ ಗಾಂಧಿ ಮಾಡಿದ್ದ ಆರೋಪ ಏನು?: ಫೆ 7ರಂದು ಹಿಂಡನ್ ಬರ್ಗ್ ವರದಿ ಉಲ್ಲೇಖಿಸಿ ಸದನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಅದಾನಿ ಸಮೂಹ ಸಂಸ್ಥೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ತಮ ಸಂಬಂಧ ಇದೆ. ಕೆಲವು ಬಿಲೇನಯರ್ ಕೈಗಾರಿಕೋದ್ಯಮಿಗಳ ಓಲೈಕೆಗಾಗಿ ಕೆಲವು ವಲಯಗಳಲ್ಲಿ ನಿಯಮಗಳನ್ನು ಬದಲಾಯಿಸಲಾಗಿದೆ ಎಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಆರೋಪಿಸಿದ್ದರು.
ಗೌತಮ್ ಅದಾನಿ ಜೊತೆಗೆ ಪ್ರಧಾನಿ ಮೋದಿ ಅವರ ಸ್ನೇಹ ಅವರು ಗುಜರಾತ್ ಮುಖ್ಯಮಂತ್ರಿಯಾದಗಲೇ ಇತ್ತು. 2014ರಲ್ಲಿ ರಿಯಲ್ ಮ್ಯಾಜಿಕ್ ಶುರುವಾಯಿತು. ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 609ನೇ ಸ್ಥಾನದಲ್ಲಿದ್ದ ಅದಾನಿ ಬಳಿಕ ಎರಡನೇ ಸ್ಥಾನ ತಲುಪಿದರು. ಪ್ರಧಾನಿ ಮೋದಿ ಅವರಿಗೆ ಭುಜಕೊಟ್ಟು ಭುಜ ಒದಗಿಸಿ ಒಬ್ಬ ವ್ಯಕ್ತಿ ನಿಂತಿದ್ದ. ಪ್ರಧಾನಿ ಬಲು ನಿಷ್ಟೆಯಿಂದ ಆ ವ್ಯಕ್ತಿ ಇದ್ದ. 2014ರಲ್ಲಿ ಪ್ರಧಾನಿ ರಾಷ್ಟ್ರ ರಾಜಧಾನಿ ತಲುಪಿದ ಬಳಿಕ ನಿಜವಾದ ಮ್ಯಾಜಿಕ್ ಶುರುವಾಯಿತು ಎಂದು ಮೋದಿ ವಿರುದ್ಧ ಆರೋಪ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರಾಹುಲ್ ಗಾಂಧಿ ಹೇಳಿಕೆ ವಿರೋಧಿಸಿ ಸಂಸತ್ತಿನ ಕೆಳಮನೆ ಮತ್ತು ಮೇಲ್ಮನೆಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಈ ಕುರಿತು ಮಾತನಾಡಿದ ಬಿಜೆಪಿ ನಾಯಕ ರವಿ ಶಂಕರ್ ಪ್ರಸಾದ್, ಇದು ಹುರುಳಿಲ್ಲದ ಆರೋಪ ಮತ್ತು ಇಡೀ ಕಾಂಗ್ರೆಸ್ ವ್ಯವಸ್ಥೆ ನಿಂತಿರುವುದೇ ಡೀಲ್ ಮತ್ತು ಕಮಿಷನ್ ಮೇಲೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ಪ್ರಧಾನಿ: ಕಾಂಗ್ರೆಸ್ ಸೈನಿಕರ ಶೌರ್ಯ ಕಡೆಗಣಿಸಿದೆ ಎಂದ ಮೋದಿ