ತಿರುಪತಿ (ಆಂಧ್ರ ಪ್ರದೇಶ): ತಿರುಪತಿ ವೆಂಕಟೇಶ್ವರ ಸ್ವಾಮಿ ಸನ್ನಿಧಾನಕ್ಕೆ ಆಗಮಿಸುವ ಭಕ್ತರು ಉಳಿದುಕೊಳ್ಳಲು ಮೊದಲೇ ರೂಮ್ ಬುಕ್ ಮಾಡುಕೊಳ್ಳುತ್ತಿದ್ದವರಿಗೆ ಟಿಟಿಡಿ ಸಿಹಿ ಸುದ್ದಿ ನೀಡಿದೆ. ರೂಮ್ಗಳ ಮುಂಗಡ ಕಾಯ್ದಿರಿಸುವಿಕೆ ಪ್ರಕ್ರಿಯೆಯನ್ನ ಇನ್ನಷ್ಟು ಸರಳೀಕರಿಸಿದೆ.
ಇದರ ಭಾಗವಾಗಿ ಅಲಿಪಿರಿ ಪಡಾಲ ಮಂಟಪ, ಟೋಲ್ ಗೇಟ್ ಮತ್ತು ಶ್ರೀವಾರಿ ಮೆಟ್ಟುವಿನಲ್ಲಿ ಮೂರು ರೂಮ್ ರಶೀದಿ ಸ್ಕ್ಯಾನಿಂಗ್ ಸೆಂಟರ್ ಆರಂಭಿಸಲಾಗಿದೆ. ಈ ಮೊದಲು, ಕೊಠಡಿಗಳನ್ನು ಮುಂಚಿತವಾಗಿ ಕಾಯ್ದಿರಿಸಿದ ಪ್ರಯಾಣಿಕರು, ಮೊದಲು ಸಿಆರ್ಒ ಕಚೇರಿಗೆ ಹೋಗಿ ಅಲ್ಲಿನ ರಶೀದಿಗಳನ್ನು ಸ್ಕ್ಯಾನ್ ಮಾಡಬೇಕಾಗಿತ್ತು. ನಂತರ ಅವರು ಉಪ ವಿಚಾರಣಾ ಕಚೇರಿಗೆ ತೆರಳಿದ ಬಳಿಕವಷ್ಟೇ ಕೊಠಡಿಗಳನ್ನು ಪಡೆಯಬೇಕಿತ್ತು.
ತಿರುಪತಿಯಿಂದ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಅಲಿಪಿರಿ ಪಡಾಲ ಮಂಟಪದಲ್ಲಿ ಸ್ಕ್ಯಾನಿಂಗ್ ಕೌಂಟರ್‌ಗಳನ್ನು ಸ್ಥಾಪಿಸಲಾಗುವುದು ಮತ್ತು ವಾಹನಗಳಲ್ಲಿ ಬರುವವರಿಗೆ ಶ್ರೀವರಿ ಮೆಟ್ಟು ಮತ್ತು ಅಲಿಪಿರಿ ಟೋಲ್‌ಗೇಟ್‌ನಲ್ಲಿ ಕೌಂಟರ್‌ಗಳನ್ನು ನಿಗದಿಪಡಿಸಲಾಗಿದೆ.
ಸ್ಕ್ಯಾನಿಂಗ್ ಮಾಡಿದ ಸ್ವಲ್ಪ ಸಮಯದ ನಂತರ ಉಪ ವಿಚಾರಣಾ ಕಚೇರಿಯ ವಿವರಗಳನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಅದರೊಂದಿಗೆ ಪ್ರಯಾಣಿಕರು ನೇರವಾಗಿ ಕಚೇರಿಗೆ ಹೋಗಿ ಅವರ ಕೊಠಡಿಗಳನ್ನು ಪಡೆದುಕೊಳ್ಳಬಹುದಾಗಿದೆ.
ಇದಲ್ಲದೆ ತಿರುಮಲದಲ್ಲಿ 12 ಕಡೆ ಸಿಆರ್ಒ ಕಚೇರಿ ತೆರೆಯಲಾಗುವುದು. ರೂಮ್ ಹಂಚಿಕೆ ಮಾಡುವ ಕೇಂದ್ರಗಳನ್ನು ಉಪವಿಚಾರಣಾ ಕಚೇರಿಗೆ ಸ್ಥಳಾಂತರಿಸಲಾಗುವುದು ಎಂದು ಟಿಟಿಡಿ ಮಾಹಿತಿ ನೀಡಿದೆ.