ಪುಣೆ: ಮುಂಬೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನವಲೆ ಸೇತುವೆ ಸಮೀಪ ಸರಣಿ ಅಪಘಾತ ಸಂಭವಿಸಿದೆ. ಸುಮಾರು 48 ವಾಹನಗಳು ಜಖಂಗೊಂಡಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ಪುಣೆ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಪುಣೆ ಮಾರ್ಗವಾಗಿ ತೆರಳುತ್ತಿದ್ದ ಟ್ರಕ್ನ ಬ್ರೇಕ್ ವೈಫಲ್ಯದಿಂದಾಗಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಈಗಾಗಲೇ ಸ್ಥಳಕ್ಕೆ ಪುಣೆ ಅಗ್ನಿಶಾಮಕ ದಳ ಮತ್ತು ಪುಣೆ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (ಪಿಎಂಆರ್‌ಡಿಎ) ರಕ್ಷಣಾ ತಂಡಗಳು ಆಗಮಿಸಿದ್ದು, ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಅಪಘಾತದಿಂದಾಗಿ ಮುಂಬೈಗೆ ಹೋಗುವ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. 2 ಕಿ.ಮೀ ಗೂ ಹೆಚ್ಚು ದೂರು ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ.
ಇದನ್ನೂ ಓದಿ: ಬಿಹಾರ ರಸ್ತೆ ಅಪಘಾತದಲ್ಲಿ ಸಾವಿನ ಸಂಖ್ಯೆ 12 ಕ್ಕೇರಿಕೆ; ಪರಿಹಾರ ಘೋಷಿಸಿದ ಪ್ರಧಾನಿ
ಈ ಕುರಿತು ಮಾಹಿತಿ ನೀಡಿರುವ ಉಪ ಪೊಲೀಸ್ ಆಯುಕ್ತ ಸುಹೇಲ್ ಶರ್ಮಾ, "ಟ್ರಕ್ವೊಂದು ಬ್ರೇಕ್ ಫೈಲೂರ್ ಆಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕನಿಷ್ಠ 48 ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಹಾನಿಗೊಳಗಾದ ವಾಹನಗಳನ್ನು ರಸ್ತೆಯಿಂದ ಸ್ಥಳಾಂತರಗೊಳಿಸಲಾಗುತ್ತಿದೆ" ಎಂದಿದ್ದಾರೆ
ಅಪಘಾತದಲ್ಲಿ ಹಾನಿಗೊಳಗಾದ ಕಾರೊಂದರ ಮಾಲೀಕರೊಬ್ಬರು ಮಾತನಾಡಿ, "ವೇಗವಾಗಿ ಬಂದ ಟ್ರಕ್ ಮೊದಲು ರಸ್ತೆಯಲ್ಲಿದ್ದ ಕೆಲವು ವಾಹನಗಳಿಗೆ ಡಿಕ್ಕಿ ಹೊಡೆಯಿತು. ನಮ್ಮ ಕಾರಿಗೂ ಡಿಕ್ಕಿ ಹೊಡೆದಿದೆ. ವಾಹನದಲ್ಲಿ ನಾವು ನಾಲ್ಕು ಜನರಿದ್ದೆವು. ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ" ಎಂದರು.