ಕೊಲ್ಕತ್ತಾ: ರುಜಿರಾ ಬ್ಯಾನರ್ಜಿ ಅವರು ತಮ್ಮ ಪತಿ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡಿದ ಕುರಿತು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ಕೊಲ್ಕತ್ತಾ ಹೈಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಮಾರ್ಗಸೂಚಿಗಳನ್ನು ನಿಗದಿಪಡಿಸಿದೆ.
ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿತ್ತು. ಜಾರಿ ನಿರ್ದೇಶನಾಲಯದ ತನಿಖೆಯನ್ನು ಮುಂದಿಟ್ಟುಕೊಂಡು ಮಾಧ್ಯಮಗಳು ತಮ್ಮ ಹೆಸರಿನಲ್ಲಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿವೆ ಎಂದು ರುಜಿರಾ ಬ್ಯಾನರ್ಜಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ಅವರು, ಮಾಧ್ಯಮಗಳ ಪಾತ್ರದ ಬಗ್ಗೆ ಮಧ್ಯಂತರ ನಿರ್ದೇಶನದ ಮೂಲಕ ಇಡಿಗೆ ಕೆಲವು ಮಾರ್ಗಸೂಚಿಗಳನ್ನು ನೀಡಿದೆ.
ಮಾರ್ಗಸೂಚಿಯಲ್ಲಿ ಹೇಳಿರುವಂತೆ, ಹಗರಣಗಳಿಗೆ ಸಂಬಂಧಿಸಿದಂತೆ ಶೋಧಕಾರ್ಯ ನಡೆಸುತ್ತಿರುವಾಗ ಅಥವಾ ಏನನ್ನಾದರೂ ವಶಪಡಿಸಿಕೊಳ್ಳುವ ಸಂದರ್ಭ ಯಾವುದೇ ಲೈವ್ ಸ್ಟ್ರೀಮಿಂಗ್ ಮಾಡುವಂತಿಲ್ಲ. ಶೋಧ ಕಾರ್ಯ ಅಥವಾ ವಶಪಡಿಕೊಳ್ಳುವ ಬಗ್ಗೆ ಜಾರಿ ನಿರ್ದೇಶನಾಲಯ ಮುಂಚಿತವಾಗಿಯೇ ಮಾಧ್ಯಮಗಳಿಗೆ ಮಾಹಿತಿ ನೀಡುವಂತಿಲ್ಲ. ಶೋಧ ಕಾರ್ಯಾಚರಣೆಯ ಸಂದರ್ಭ ಯಾವುದೇ ಮಾಧ್ಯಮ ಸಂಸ್ಥೆ ಅಥವಾ ಪತ್ರಕರ್ತ ಇಡಿ ಜೊತೆಗೆ ಬರುವಂತಿಲ್ಲ. ಇಡಿ ಶೋಧ ಕಾರ್ಯಾಚರಣೆ ಬಗ್ಗೆ ಮೊದಲೇ ಮಾಹಿತಿ ಬಹಿರಂಗ ಪಡಿಸುವಂತಿಲ್ಲ. ಪತ್ರಿಕೆಗಳು ಯಾವುದೇ ಸುದ್ದಿಯನ್ನು ಪ್ರಸಾರ ಮಾಡಿದರೂ, ಆರೋಪ ಪಟ್ಟಿ ಸಲ್ಲಿಸುವ ಮುನ್ನ ಅಲ್ಲಿ ಆರೋಪಿಗಳು ಅಥವಾ ಯಾವುದೇ ಚಿತ್ರವನ್ನು ಮುದ್ರಿಸುವಂತಿಲ್ಲ ಎಂದು ನ್ಯಾಯಾಲಯ ತನ್ನ ಮಾರ್ಗಸೂಚಿಯಲ್ಲಿ ಹೇಳಿದೆ.
ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಲ್ಲಿ ರುಜಿರಾ ಅಥವಾ ಅಭಿಷೇಕ್ ಬ್ಯಾನರ್ಜಿ ಅವರು ಆ ನಿರ್ದಿಷ್ಟ ಸುದ್ದಿ ಸಂಸ್ಥೆ ವಿರುದ್ಧ ನಿಂದನೆ ಪ್ರಕರಣವನ್ನು ದಾಖಲಿಸಬಹುದು ಎಂದು ಹೇಳಿ, ಎರಡೂ ಕಡೆಯವರು ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಧೀಶರು ಆದೇಶಿಸಿದರು. ಈ ಪ್ರಕರಣದ ಕುರಿತು ಮುಂದಿನ ವಿಚಾರಣೆ 2024ರ ಜನವರಿಯಲ್ಲಿ ನಡೆಯಲಿದೆ.
ಕಳೆದ ವಾರ ರುಜಿರಾ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನಂತರ ನ್ಯಾಯಾಲಯ ತೀರ್ಪನ್ನು ಮುಂದೂಡಿತ್ತು. ತನ್ನ ವಿಚಾರಣೆಯ ವಿವರಗಳನ್ನು ತನ್ನ ವೆಬ್ಸೈಟ್ನಲ್ಲಿ ಉಲ್ಲೇಖಿಸಿದೆ. ದೊಡ್ಡ ಮಾಧ್ಯಮ ಸಂಸ್ಥೆಗಳು ಪ್ರಕಟಿಸಿದ ಅಥವಾ ಪ್ರಸಾರ ಮಾಡುವ ಸುಳ್ಳು ಸುದ್ದಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು. ಆದರೆ, ಸಣ್ಣ ಪೋರ್ಟಲ್ಗಳು ಮತ್ತು ಯೂಟ್ಯೂಬ್ ಚಾನೆಲ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಅದಲ್ಲದೇ ಇಡಿ ಸ್ವತಂತ್ರ ಸಂಸ್ಥೆಯಾಗಿದ್ದು, ಗಾಸಿಪ್ ಮ್ಯಾಗಜಿನ್ ಅಲ್ಲ ಎಂದು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿದೆ.
ಇದೇ ವೇಳೆ, ಇಡಿ ಸಂಸ್ಥೆ, ರುಜಿರಾ ಬ್ಯಾನರ್ಜಿ ಅವರು ವಿದೇಶಿ ಪ್ರಜೆಯಾಗಿದ್ದು, ಅವರು ಭಾರತೀಯ ಸಂವಿಧಾನದ 19 ಹಾಗೂ 21ನೇ ವಿಧಿಗಳನ್ನು ರದ್ದುಗೊಳಿಸುವಂತೆ ಸೂಚಿಸಲು ಮನವಿ ಮಾಡಬಾರದು ಎಂದು ಖಡಕ್ ಆಗೇ ಹೇಳಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಅಭಿಷೇಕ್ ಅವರ ಪತ್ನಿ ರುಜಿರಾ ಬ್ಯಾನರ್ಜಿ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿತ್ತು. ಅದಕ್ಕೂ ಮೊದಲ ಅಭಿಷೇಕ್ ಅವರ ತಂದೆ ಅಮಿತ್ ಹಾಗೂ ತಾಯಿ ಲತಾ ಬ್ಯಾನರ್ಜಿ ಅವರೂ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ಜಾರಿ ಮಾಡಿತ್ತು.
ಇದನ್ನೂ ಓದಿ : ಶಿಕ್ಷಕರ ನೇಮಕಾತಿ ಹಗರಣ: ಇಡಿ ವಿಚಾರಣೆಗೆ ಹಾಜರಾಗಲ್ಲ ಎಂದ ತೃಣಮೂಲ ಸಂಸದ ಬ್ಯಾನರ್ಜಿ