ನವದೆಹಲಿ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರನ್ನು ಆಮ್ ಆದ್ಮಿ ಪಕ್ಷ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ಪಕ್ಷದ ಹಿರಿಯ ಮುಖಂಡ ಸಂಜಯ್ ಸಿಂಗ್ ಮತ್ತು ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಎನ್.ಡಿ.ಗುಪ್ತಾ ಅವರನ್ನು ರಾಜ್ಯಸಭೆಗೆ ಎರಡನೇ ಅವಧಿಗೆ ಮರು ಆಯ್ಕೆ ಮಾಡಲಾಗಿದೆ.
ಆಪ್ ರಾಷ್ಟ್ರೀಯ ಸಂಚಾಲಕರಾದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಧ್ಯಕ್ಷತೆಯಲ್ಲಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯು (ಪಿಎಸಿ) ಈ ನಾಮನಿರ್ದೇಶನಗಳನ್ನು ಶುಕ್ರವಾರ ಪ್ರಕಟಿಸಿತು. ''ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರನ್ನು ರಾಜ್ಯಸಭೆಗೆ ಮೊದಲ ಬಾರಿಗೆ ನಾಮನಿರ್ದೇಶನ ಮಾಡಲಾಗಿದೆ. ಸಂಜಯ್ ಸಿಂಗ್ ಮತ್ತು ಎನ್.ಡಿ.ಗುಪ್ತಾ ಅವರು ಎರಡನೇ ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಮುಂದುವರಿಯಲಿದ್ದಾರೆ" ಎಂದು ಪಕ್ಷ ತಿಳಿಸಿದೆ.
''ಹಾಲಿ ಇಬ್ಬರು ರಾಜ್ಯಸಭೆ ಸದಸ್ಯರ ಮರು ನಾಮನಿರ್ದೇಶನಕ್ಕಾಗಿ ಸಮಿತಿ ಅನುಮೋದಿಸಿದೆ. ಆದರೆ, ಮತ್ತೊಬ್ಬ ಹಾಲಿ ಸದಸ್ಯ ಸುಶೀಲ್ ಕುಮಾರ್ ಗುಪ್ತಾ ಅವರು ಹರಿಯಾಣದ ಚುನಾವಣಾ ರಾಜಕೀಯದತ್ತ ತಮ್ಮ ಗಮನ ಹರಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ'' ಎಂದು ಪಕ್ಷ ಹೇಳಿದೆ. ಗುಪ್ತಾ ಅಧಿಕಾರಾವಧಿ ಈ ತಿಂಗಳಾಂತ್ಯಕ್ಕೆ ಕೊನೆಗೊಳ್ಳಲಿದೆ.
ಹಾಲಿ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷರಾದ ಸ್ವಾತಿ ಮಲಿವಾಲ್ ಮಹಿಳೆಯರ ಹಕ್ಕುಗಳು ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತ ಸಕ್ರಿಯ ವಕೀಲರಾಗಿದ್ದಾರೆ. ಮಹಿಳೆಯರ ವಿರುದ್ಧದ ದೌರ್ಜನ್ಯ ನಿಯಂತ್ರಣಕ್ಕೆ ಕಠಿಣ ಕಾನೂನುಗಳನ್ನು ಪ್ರತಿಪಾದಿಸುತ್ತಾ, ಲಿಂಗ ಸಮಾನತೆಯ ವಿವಿಧ ಅಭಿಯಾನಗಳು ಮತ್ತು ಚಳುವಳಿಗಳಲ್ಲಿ ಇವರು ಪಾಲ್ಗೊಂಡಿದ್ದಾರೆ. 2015ರಲ್ಲಿ ಆಯೋಗದ ಅಧ್ಯಕ್ಷರಾಗಿ ನೇಮಕವಾಗಿದ್ದರು.
ಜೈಲಿನಲ್ಲಿರುವ ಸಂಜಯ್ ಸಿಂಗ್: ಮತ್ತೊಂದೆಡೆ, ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ಸಿಂಗ್ ಸದ್ಯ ಜೈಲಿನಲ್ಲಿದ್ದಾರೆ. ರಾಜ್ಯಸಭೆ ಮರುನಾಮಕರಣಕ್ಕಾಗಿ ಅರ್ಜಿ ನಮೂನೆಗಳು ಮತ್ತು ದಾಖಲೆಗಳಿಗೆ ಸಹಿ ಹಾಕಲು ಅವರಿಗೆ ನ್ಯಾಯಾಲಯ ಅನುಮತಿ ನೀಡಿದೆ. ಇವರ ಪ್ರಸ್ತುತ ಅವಧಿಯು ಜನವರಿ 27ರಂದು ಮುಕ್ತಾಯಗೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ಎಎಪಿ ನಾಯಕ ಸಲ್ಲಿಸಿದ ಅರ್ಜಿಯ ಮೇರೆಗೆ ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್ಪಾಲ್ ದಾಖಲೆಗಳಿಗೆ ಸಹಿ ಹಾಕಲು ಅವಕಾಶ ನೀಡಿ ಆದೇಶಿಸಿದ್ದರು. ದಾಖಲೆಗಳಿಗೆ ಸಹಿ ಹಾಕಲು ಸಿಂಗ್ ಅವರಿಗೆ ಅನುಮತಿ ನೀಡುವಂತೆ ತಿಹಾರ್ ಜೈಲು ಸೂಪರಿಂಟೆಂಡೆಂಟ್‌ಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ರಾಜ್ಯಸಭೆ ಚುನಾವಣೆಗೆ ಜನವರಿ 2ರಂದು ಅಧಿಸೂಚನೆ ಹೊರಡಿಸಲಾಗಿದ್ದು, ನೋಟಿಸ್ ಜಾರಿಗೊಳಿಸಿದ್ದಾರೆ. ಜನವರಿ 9ರಂದು ಚುನಾವಣೆ ನಡೆಯಲಿದ್ದು, ಅಷ್ಟರೊಳಗೆ ನಾಮಪತ್ರಗಳನ್ನು ಸಲ್ಲಿಸಬೇಕಿದೆ.
ಇದನ್ನೂ ಓದಿ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಸೇರಿ 24 ಶಿಫಾರಸುಗಳನ್ನು ಸಲ್ಲಿಸಿದ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ