ಗಾಂಧಿನಗರ, ಗುಜರಾತ್ : ಎಎಪಿ ಶಾಸಕ ಚೈತ್ರಾ ವಾಸವ ತಮ್ಮ ನೂರಾರು ಬೆಂಬಲಿಗರೊಂದಿಗೆ ದೇಡಿಯಾಪದ ಪೊಲೀಸ್ ಠಾಣೆಗೆ ಆಗಮಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ ಮತ್ತು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಒಂದು ತಿಂಗಳ ಹಿಂದೆ ದಾಖಲಾಗಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷದ ಗುಜರಾತ್ ರಾಜ್ಯಾಧ್ಯಕ್ಷ ಇಸುದನ್ ಗಧ್ವಿ, ಆಮ್ ಆದ್ಮಿ ಪಕ್ಷದ ಶಾಸಕ ಹಾಗೂ ಜನಪ್ರಿಯ ಬುಡಕಟ್ಟು ನಾಯಕ ಚೈತ್ರಾ ವಾಸವ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ನಿನ್ನೆ ಅವರು ಸಾವಿರಾರು ಬೆಂಬಲಿಗರ ಸಮ್ಮುಖದಲ್ಲಿ ನರ್ಮದಾ ಪೊಲೀಸರ ಮುಂದೆ ಹಾಜರಾದರು. ಎಎಪಿ ನಾಯಕ ವಿರುದ್ಧ ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ ಎಂದು ಹೇಳಿದ್ದಾರೆ.
"ವಾಸವ ಅವರು ಬೆಳಗ್ಗೆ ತಮ್ಮ ಪಕ್ಷದ ಕಚೇರಿಯಿಂದ ಮೆರವಣಿಗೆ ನಡೆಸಿ ನೂರಾರು ಬೆಂಬಲಿಗರೊಂದಿಗೆ ದೇಡಿಯಾಪದ ಪೊಲೀಸ್ ಠಾಣೆಗೆ ಆಗಮಿಸಿದರು. ಮೆರವಣಿಗೆಯ ಕೆಲ ವಿಡಿಯೋಗಳನ್ನು ಅವರ ಬೆಂಬಲಿಗರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಶಾಸಕರು ಶರಣಾದ ನಂತರ ಪೊಲೀಸರು ಔಪಚಾರಿಕವಾಗಿ ಬಂಧಿಸಿದ್ದರು. ಇವರೊಂದಿಗೆ ಇತರ ಮೂವರು ಆರೋಪಿಗಳು ಶರಣಾಗಿದ್ದಾರೆ" ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಘನಶ್ಯಾಮ್ ಸರ್ವಯ್ಯ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ : ಕೆಲ ದಿನಗಳ ಹಿಂದೆ ದೇಡಿಯಾಪದವಿನ ಫುಲ್ಸರ್ ವ್ಯಾಪ್ತಿಯ ಕೋಳಿವಾಡ ಗ್ರಾಮದ ಸಂರಕ್ಷಿತ ಅರಣ್ಯದಲ್ಲಿ ಕೆಲ ರೈತರು ಕೃಷಿ ಮಾಡಿದ್ದರು. ಅಕ್ರಮ ಉಳುಮೆ ಮಾಡಬೇಡಿ ಎಂದು ಅರಣ್ಯ ಇಲಾಖೆ ನೌಕರರು ರೈತರಿಗೆ ಎಚ್ಚರಿಕೆ ನೀಡಿದ್ದರು. ಈ ವಿಚಾರ ತಿಳಿದ ಶಾಸಕ ಚೈತ್ರಾ ವಾಸವ ಅವರು ಅರಣ್ಯ ಇಲಾಖೆ ನೌಕರರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು, ಬೆದರಿಸಿ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಜೊತೆಗೆ, ಶಾಸಕರು ರೈತರನ್ನು ತಡೆಯಬೇಡಿ ಎಂದು ಬೆದರಿಕೆ ಹಾಕಿ, ತಮ್ಮ ಬಳಿಯಿದ್ದ ಆಯುಧದಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಜೊತೆಗೆ, ರೈತರಿಗೆ ನಗದು ಮೊತ್ತ ಪಾವತಿಸುವಂತೆ ತಿಳಿಸಿದ್ದಾರೆ ಎಂದು ದೇಡಿಯಾಪದವು ಪೊಲೀಸ್ ಠಾಣೆಯಲ್ಲಿ ಅರಣ್ಯ ಇಲಾಖೆ ನೌಕರರು ಹೇಳಿಕೆ ನೀಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನೆ ನಡೆದ 42 ದಿನಗಳಿಂದ ಶಾಸಕರು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪೊಲೀಸರ ಮುಂದೆ ಶಾಸಕರು ಶರಣಾಗಿದ್ದಾರೆ. ಸದ್ಯಕ್ಕೆ ಪೊಲೀಸರು ವಾಸವ ಅವರನ್ನು ರಾಜ್‌ಪಿಪ್ಲಾಗೆ ವಿಚಾರಣೆಗಾಗಿ ಕರೆದೊಯ್ದಿದ್ದಾರೆ.
ಇದನ್ನೂ ಓದಿ : ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಉತ್ತಮ ಭವಿಷ್ಯ: ಕರ್ನಾಟಕ ಉಸ್ತುವಾರಿ ದಿಲೀಪ್ ಪಾಂಡೆ