ತಿರುವನಂತಪುರ(ಕೇರಳ): ಲಾಟರಿ ಟಿಕೆಟ್ ಹೊಡೆಯುವುದು ಅದೃಷ್ಟದ ಜೊತೆಗೆ ಸಮಸ್ಯೆಯನ್ನು ತರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಕೇರಳದ ಅನೂಪ್ ಎಂ. 31 ವರ್ಷದ ಅನೂಪ್ಗೆ 25 ಕೋಟಿ ಲಾಟರಿ ಹೊಡೆದು ಇದೀಗ ಕೋಟ್ಯಾಧಿಪತಿ ಆಗಿದ್ದಾರೆ. ರಾಜ್ಯ ಸರ್ಕಾರ ನಡೆಸುತ್ತಿರುವ ಲಾಟರಿ ವ್ಯವಹಾರದ ಏಜೆಂಟ್ ಆಗಿದ್ದ ಅನೂಪ್ಗೆ ಕೋಟಿ ಕೋಟಿ ಹಣದ ಜೊತೆ ಸಂಕಷ್ಟ ಕೂಡ ಎದುರಾಗಿದೆ. ಕಾರಣ, ಹಣ ಬಂದೊಡನೆ ಅವರಿಗೆ ಇದೀಗ ಗೊತ್ತಿರುವವರು, ಗೊತ್ತಿಲ್ಲದವರು ಆರ್ಥಿಕ ಸಹಾಯ ಕೋರಿ ದುಂಬಾಲು ಬೀಳುತ್ತಿದ್ದಾರೆ. ಇದರಿಂದ ರೋಸಿ ಹೋಗಿರುವ ಅನೂಪ್ ನಾನು ಈ ಹಣ ಗೆಲ್ಲದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಈತ ಇದೀಗ ಲಾಟರಿ ಏಜೆಂಟ್ ಆಗಿದ್ದು, ಎಂಎ ಲಾಟರಿ ಸೆಂಟರ್ ಎಂಬ ಮಳಿಗೆಯನ್ನು ತೆರೆದಿದ್ದ. ಕಳೆದ ವರ್ಷ ಅನೂಪ್ ಕೇರಳ ಲಾಟರಿ ಇತಿಹಾಸದಲ್ಲೇ ಬಂಪರ್ ಬಹುಮಾನ ಪಡೆದಿದ್ದರು. ತಿರುವೊಣಂ ಬಂಪರ್ನಲ್ಲಿ 25 ಕೋಟಿ ಗೆದ್ದ ಇವರಿಗೆ ಆರ್ಥಿಕ ಸಹಾಯ ಮಾಡು ಎನ್ನುವವರ ಸಂಖ್ಯೆಯೂ ಹೆಚ್ಚಾಗಿದೆ.
ಸಹಾಯಕ್ಕಾಗಿ ಜನರು ಇವರ ಮನೆ ಬಾಗಿಲ ಮುಂದೆ ಸಾಲು ಸಾಲು ನಿಲ್ಲುತ್ತಿರುವುದರಿಂದ ಅನೂಪ್ ಮನೆಯನ್ನು ಪದೇ ಪದೇ ಬದಲಾಯಿಸುವಂತೆ ಆಗಿದೆ. ಇದರ ಜೊತೆಗೆ ನಿಧಾನವಾಗಿ ಐಷಾರಾಮಿ ಜೀವನ ನಡೆಸಲು ಕೂಡ ಮುಂದಾಗಿದ್ದಾರೆ. ಯಾವುದು ಬದಲಾಗಿಲ್ಲ ಎಂದು ಮಾತು ಮುಂದುವರೆಸಿರುವ ಅನೂಪ್, ಆರ್ಥಿಕ ಸಹಾಯ ಕೋರಿ ಅನೇಕ ಪತ್ರ ಮತ್ತು ಜನರು ನನ್ನ ಬಳಿ ಬರುತ್ತಿದ್ದಾರೆ. ಇದರಿಂದ ರೋಸಿ ಹೋಗಿದ್ದೇನೆ ಎನ್ನುತ್ತಾರೆ. ಸದ್ಯ ಕೇರಳ ಸರ್ಕಾರದ ಒಡೆತನ ಲಾಟರಿ ವ್ಯವಹಾರದಲ್ಲಿ ಮಿನುಗುವ ನಕ್ಷತ್ರವಾಗಿ ಅನೂಪ್ ಎಲ್ಲರಿಗೂ ಕಾಣುತ್ತಿದ್ದಾರೆ.
ಕೇರಳ ಲಾಟರಿ ವಿಭಾಗದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ನೋಂದಾಯಿತ ಏಜೆಂಟ್ ಇದ್ದಾರೆ. ಅವರ ಕೆಳಗೆ ಅನೇಕ ನೋಂದಾಯಿತವಲ್ಲದೇ ಉಪ ಎಜೆಂಟ್ ಮತ್ತು ಮಾರಾಟಗಾರರಿದ್ದಾರೆ. ಈ ಲಾಟರಿ ವ್ಯವಹಾರ ಅನೇಕ ಜನರಿಗೆ ಜೀವನೋಪಾಯವಾಗಿದೆ.
2021ರ ಆರ್ಥಿಕ ವರ್ಷದಲ್ಲಿ ಲಾಟರಿ ವ್ಯವಹಾರದಿಂದ ಒಟ್ಟು ವಹಿವಾಟು 7,145.22 ಕೋಟಿ ರೂ ಆಗಿದ್ದು, ಅದರಲ್ಲಿ 4,079.28 ಕೋಟಿ ರೂ.ಗಳನ್ನು ಬಹುಮಾನಕ್ಕಾಗಿ ಖರ್ಚು ಮಾಡಲಾಗಿದೆ. ಏಜೆಂಟರಿಗೆ ರಿಯಾಯಿತಿಗಾಗಿ 1,798.32 ಕೋಟಿ ಮತ್ತು ಏಜೆಂಟರ ಬಹುಮಾನಕ್ಕಾಗಿ 524.3 ಕೋಟಿ ರೂ. ನೀಡಲಾಗಿತ್ತು.
ಲಾಟರಿ ಮಾರಾಟದ ಮೂಲಕ ಸಂಗ್ರಹಿಸಿದ ಎಲ್ಲಾ ಹಣವನ್ನು ಸರ್ಕಾರದ ವಿವಿಧ ಸಮಾಜ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಬಳಸಲಾಗುತ್ತದೆ. ಕೇವಲ ಕೇರಳಿಗರು ಮಾತ್ರವಲ್ಲದೇ, ನೆರಯ ರಾಜ್ಯಗಳ ಜನರು ಮತ್ತು ವಲಸೆ ಕಾರ್ಮಿಕರು ಕೂಡ ಈ ಲಾಟರಿಯನ್ನು ಖರೀದಿಸುತ್ತಿದ್ದಾರೆ. ಲಾಟರಿ ಕಾಯ್ದೆಯ ಪ್ರಕಾರ, ಕೇರಳದ ಭೌಗೋಳಿಕ ಗಡಿಯಲ್ಲಿ ಮಾತ್ರ ಟಿಕೆಟ್‌ಗಳನ್ನು ಮಾರಾಟ ಮಾಡಬಹುದು. ಆದರೆ ರಾಜ್ಯಕ್ಕೆ ಭೇಟಿ ನೀಡುವ ಯಾರಾದರೂ ಟಿಕೆಟ್ ಖರೀದಿಸಬಹುದು ಮತ್ತು ಅಗತ್ಯ ದಾಖಲೆಗಳು ಮತ್ತು ಟಿಕೆಟ್‌ನ ಮೂಲವನ್ನು ಒದಗಿಸುವ ಮೂಲಕ ಬಹುಮಾನದ ಮೊತ್ತವನ್ನು ಪಡೆಯಬಹುದು. ಟಿಕೆಟ್ ಖರೀದಿ ಹೆಚ್ಚುಗುತ್ತಿದ್ದಂತೆ, ಅನೇಕ ಮಂದಿ ಟಿಕೆಟ್ ಮಾರಾಟಕ್ಕೆ ಮುಂದಾಗುವ ಮೂಲಕ ಉದ್ಯೋಗ ಪಡೆಯುತ್ತಿದ್ದಾರೆ ಎಂದು ರಾಜ್ಯ ಲಾಟರಿ ನಿರ್ದೇಶನಾಲಯದ ಪ್ರಚಾರ ಅಧಿಕಾರಿ ಬಿ ಟಿ ಅನಿಲ್ ಕುಮಾರ್ ಹೇಳಿದರು.
ಇದನ್ನೂ ಓದಿ: ಕೊರೊನಾಗೆ ಹೆದರಿ 3 ವರ್ಷದಿಂದ ಮನೆಯಲ್ಲೇ ಲಾಕ್ ಆಗಿದ್ದ ತಾಯಿ, ಮಗು ರಕ್ಷಣೆ