ಲುಧಿಯಾನ (ಪಂಜಾಬ್): ಉತ್ತರ ಭಾರತದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿರುವ 'ಕರ್ವಾ ಚೌತ್' ಹಬ್ಬದ ಆಚರಣೆ ವೇಳೆ ದುರಂತವೊಂದು ನಡೆದಿದೆ. ಹಬ್ಬಕ್ಕೆ ತೆರೆ ಬೀಳುವ ಮುನ್ನವೇ ವ್ಯಕ್ತಿಯೋರ್ವ ತನ್ನ ಪತ್ನಿಯ ಎದುರೇ ಮಾಳಿಗೆಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಪಂಜಾಬ್ನ ಲುಧಿಯಾನ ಜಿಲ್ಲೆಯ ಖನ್ನಾ ಪಟ್ಟಣದಲ್ಲಿ ವರದಿಯಾಗಿದೆ.
ಹಿಂದೂಗಳು ಆಚರಿಸುವ ಹಲವು ಹಬ್ಬಗಳಂತೆ ಕರ್ವಾ ಚೌತ್ ಕೂಡ ಒಂದಾಗಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ವಿವಾಹಿತ ಮಹಿಳೆಯರು ಹಾಗೂ ಪುರುಷರು ಒಂದು ದಿನ ಪೂರ್ತಿ ಉಪವಾಸ ಆಚರಿಸುತ್ತಾರೆ. ಮತ್ತೆ ಕೆಲವೆಡೆ ಅವಿವಾಹಿತ ಯುವತಿಯರು ಮತ್ತು ಯುವಕರು ಕೂಡ ಉಪವಾಸ ಕೈಗೊಳ್ಳುತ್ತಾರೆ. ಬಹುಪಾಲು ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ ಆಚರಿಸುತ್ತಾರೆ. ಸಂಜೆ ಹೊತ್ತು ಜರಡಿ ಮೂಲಕ ಚಂದ್ರನನ್ನು ವೀಕ್ಷಿಸುವ ಮೂಲಕ ಮಹಿಳೆಯರು ತಮ್ಮ ಉಪವಾಸ ಕೈಬಿಡುತ್ತಾರೆ. ಲುಧಿಯಾನ ಜಿಲ್ಲೆಯ ಖನ್ನಾ ನಗರದಲ್ಲೂ ಬುಧವಾರ ಕುಟುಂಬವೊಂದು ಕರ್ವಾ ಚೌತ್ ಹಬ್ಬದ ಆಚರಣೆಯಲ್ಲಿ ತೊಡಗಿತ್ತು.
ಬೆಳಗ್ಗೆಯಿಂದ ಸಂಜೆಯವರೆಗೂ ಮನೆಯ ಜಯಮಾನಿ ಉಪವಾಸ ಕೈಗೊಂಡಿದ್ದರು. ಚಂದ್ರನನ್ನು ನೋಡಿ ನೀರು ಕುಡಿದು ಉಪವಾಸ ಕೊನೆಗೊಳಿಸಲೆಂದು ಮಹಿಳೆಯು ಮಾಳಿಗೆ ಏರಿದ್ದರು. ಈ ವೇಳೆ ಪತ್ನಿ ಜೊತೆಗೆ ಪತಿ ಮಾಳಿಗೆ ಹತ್ತಿದ್ದರು. ಆದರೆ, ಪತಿ ಚಂದ್ರನನ್ನು ಮಾಳಿಗೆಯಿಂದ ನೋಡುತ್ತಿದ್ದಾಗ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಮೃತನನ್ನು 42 ವರ್ಷದ ಲಖ್ವಿಂದರ್ ರಾಮ್ ಎಂದು ಗುರುತಿಸಲಾಗಿದೆ. ಇದರಿಂದ ಹಬ್ಬದ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಶೋಕ ಆವರಿಸಿದೆ.
ನಡೆದಿದ್ದೇನು?: ಲಖ್ವಿಂದರ್ ರಾಮ್ ಮೂಲತಃ ಬಿಹಾರದ ನಿವಾಸಿಯಾಗಿದ್ದು, ತಮ್ಮ ಕುಟುಂಬದೊಂದಿಗೆ ಖನ್ನಾ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇವರ ಪತ್ನಿ ಕರ್ವಾ ಚೌತ್ ನಿಮಿತ್ತ ಉಪವಾಸ ಆಚರಿಸಿದ್ದರು. ಸಂಜೆ ಉಪವಾಸ ಚಂದ್ರನ ನೋಡಲು ಮಾಳಿಗೆ ಏರಿದ್ದರು. ಲಖ್ವಿಂದರ್ ರಾಮ್ ಕೂಡ ತನ್ನ ಹೆಂಡತಿಯೊಂದಿಗೆ ಚಂದ್ರನನ್ನು ಆಕಾಶದತ್ತ ದೃಷ್ಟಿ ನೆಟ್ಟಿದ್ದರು. ಈ ಸಂದರ್ಭದಲ್ಲಿ ಮಾತನಾಡುತ್ತಲೇ ಏಕಾಏಕಿ ಲಖ್ವಿಂದರ್ ರಾಮ್ ಮಾಳಿಗೆಯಿಂದ ಕೆಳಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಆಗ ತಕ್ಷಣವೇ ಲಖ್ವಿಂದರ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಕುಟುಂಬದಲ್ಲಿ ಲಖ್ವಿಂದರ್ ಅವರೊಬ್ಬರೇ ಆದಾಯ ಗಳಿಸುತ್ತಿದ್ದರು. ಇದರಿಂದ ಆ ಕುಟುಂಬ ಆಧಾರಸ್ತಂಬವನ್ನು ಕಳೆದುಕೊಂಡಂತೆ ಆಗಿದೆ. ವಾರ್ಡ್ ಕೌನ್ಸಿಲರ್ ಸುರೀಂದರ್ ಕುಮಾರ್ ಬಾವಾ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ಧಾರೆ.
ಇದನ್ನೂ ಓದಿ: ಈ ಗ್ರಾಮದಲ್ಲಿ ದೀಪಾವಳಿ ಹಬ್ಬ ನಿಷೇಧ; ಪಟಾಕಿ ಸಿಡಿಸಿದರೆ ದಂಡದ ಬರೆ!