ಹೈದರಾಬಾದ್: ನಕಲಿ ಗನ್ ಲೈಸನ್ಸ್ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್‌ನ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದು, 30 ಸಿಂಗಲ್ ಮತ್ತು ಡಬಲ್ ಬ್ಯಾರಲ್ ಗನ್, ಒಂದು ರಿವಾಲ್ವರ್, 140 ಬುಲೆಟ್‌ಗಳು, 39 ನಕಲಿ ಪರವಾನಗಿಗಳು, 29 ಬಳಕೆಯಾಗದ ಪರವಾನಗಿಗಳು ಮತ್ತು ನಕಲಿ ಸ್ಟಾಂಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗ್ಯಾಂಗ್‌ನ ಪ್ರಮುಖ ಮಾಸ್ಟರ್‌ಮೈಂಡ್ ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಕಲಿ ಪರವಾನಗಿಯೊಂದಿಗೆ ಬಂದೂಕು ಖರೀದಿಸಿ ನಂತರ ಅದನ್ನು ಹೈದರಾಬಾದ್‌ನಲ್ಲಿ ವ್ಯಾಪಾರವಾಗಿ ಪರಿವರ್ತಿಸಿದ್ದ. ದೇಶಾದ್ಯಂತ ಅವಕಾಶ ಇದೆ ಎಂಬಂತೆ ನಕಲಿ ಪರವಾನಗಿ ಸೃಷ್ಟಿಸಿ ನಿರುದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದ. ಈ ಶಸ್ತ್ರಾಸ್ತ್ರಗಳನ್ನು ಖರೀದಿಸಿದ ಯುವಕರನ್ನು ಹೈದರಾಬಾದ್‌ನ ಕೆಲವು ಖಾಸಗಿ ಕಂಪನಿಗಳು ಮತ್ತು ವಿಐಪಿಗಳಿಗೆ ಭದ್ರತಾ ಸಿಬ್ಬಂದಿಯಾಗಿ ನೇಮಿಸಲಾಗುತ್ತಿತ್ತು.
ಭದ್ರತೆಗೆ ಅಪಾಯವಾಗಿ ಪರಿಣಮಿಸಿರುವ ಈ ಗ್ಯಾಂಗ್‌ನ ಚಟುವಟಿಕೆಗಳಿಗೆ ಹೈದರಾಬಾದ್ ಟಾಸ್ಕ್ ಫೋರ್ಸ್ ಪೊಲೀಸರು ಅಡ್ಡಿಪಡಿಸಿದ್ದು, ಪ್ರಮುಖ ಆರೋಪಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಮಾಹಿತಿ ನೀಡಿದ್ದಾರೆ.
ಗ್ರೇಸ್ ಮ್ಯಾನೇಜ್‌ಮೆಂಟ್ ಸೆಕ್ಯುರಿಟಿ ಸರ್ವೀಸ್‌ನ ಪ್ರಾದೇಶಿಕ ವ್ಯವಸ್ಥಾಪಕ ವೆಂಕಟಕೊಂಡ ರೆಡ್ಡಿ, ಪಶ್ಚಿಮ ಮರೇಡುಪಲ್ಲಿಯ ಜೆರಾಕ್ಸ್ ಅಂಗಡಿ ಮಾಲೀಕ ಐ.ಶ್ರೀನಿವಾಸ್ ಆರೋಪಿಗಳಿಗೆ ಸಹಾಯ ಮಾಡಿದ್ದಾರೆ. ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ನಕಲಿ ಪರವಾನಗಿ ಸಮಸ್ಯೆ ಸಾರ್ವಜನಿಕರ ಸುರಕ್ಷತೆಗೆ ದೊಡ್ಡ ಅಪಾಯವಾಗಿದೆ ಎಂದು ಸಿ.ವಿ.ಆನಂದ್ ಆತಂಕ ವ್ಯಕ್ತಪಡಿಸಿದ್ದಾರೆ.
ಹಲವು ರಾಜ್ಯಗಳ ಯುವಕರೇ ಟಾರ್ಗೆಟ್! : 2013ರಲ್ಲಿ ಅಲ್ತಾಫ್ ಹುಸೇನ್ ಉದ್ಯೋಗಕ್ಕಾಗಿ ಹೈದರಾಬಾದ್‌ಗೆ ಬಂದಿದ್ದ. ಆತ ಮೊದಲು ಗ್ರೇಸ್ ಮ್ಯಾನೇಜ್‌ಮೆಂಟ್ ಸೆಕ್ಯುರಿಟಿ ಸೇವೆಗೆ ಸೇರಿದ್ದು, ನಂತರದಲ್ಲಿ ಎಸ್ಐಎಸ್ ನಗದು ಸೇವೆಯಲ್ಲಿ ಬಂದೂಕುಧಾರಿಯಾಗಿ ಕೆಲಸ ಮಾಡಿದ್ದ. ಭದ್ರತಾ ಏಜೆನ್ಸಿಗಳು ಬಂದೂಕು ಹೊಂದಿದ್ದರೆ ತನಗೆ ಹೆಚ್ಚಿನ ಆದ್ಯತೆ ನೀಡುತ್ತವೆ ಎಂದು ಭಾವಿಸಿ ತನ್ನ ತವರು ರಾಜ್ಯ ಕಾಶ್ಮೀರದ ರಾಜೌರಿ ಜಿಲ್ಲೆಗೆ ತೆರಳಿ ನಕಲಿ ಪರವಾನಗಿ ಪಡೆದು ಡಬಲ್ ಬ್ಯಾರಲ್ ಗನ್ ಖರೀದಿಸಿದ್ದಾನೆ.
ಬಳಿಕ ಸಿಕಂದರಾಬಾದ್‌ನ ಸ್ಟಾಂಪ್ ಮಾರಾಟಗಾರ ಹಫೀಜುದ್ದೀನ್ ಜೊತೆಗೂಡಿ, ರಾಜೌರಿ ಮ್ಯಾಜಿಸ್ಟ್ರೇಟ್ ಸಹಿಯನ್ನು ನಕಲಿ ಮಾಡಿ ಪರವಾನಗಿ ನೀಡಲು ಆರಂಭಿಸಿದ್ದರು. ಕಾಶ್ಮೀರ, ಬಿಹಾರ, ಯುಪಿ ಮತ್ತು ಇತರ ರಾಜ್ಯಗಳಿಂದ ಭದ್ರತಾ ಏಜೆನ್ಸಿಗಳಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಲು ಬಯಸುವ ಯುವಕರಿಗೆ ನಕಲಿ ಪರವಾನಗಿಗಳನ್ನು ನೀಡಿದರು.
ಇದ್ಯಾವುದೂ ಗೊತ್ತಿಲ್ಲದವರು ಈ ಲೈಸನ್ಸ್ ತೆಗೆದುಕೊಂಡು ಪುಣೆ, ನಾಗ್ಪುರಕ್ಕೆ ತೆರಳಿ 60 ಸಾವಿರದವರೆಗೆ ಖರ್ಚು ಮಾಡಿ ನಿಜವಾದ ಗನ್ ಖರೀದಿಸುತ್ತಿದ್ದರು. ಬಂದೂಕು ಖರೀದಿಸಿದ ಯುವಕರಿಂದ 20 ಸಾವಿರ ರೂಪಾಯಿಗಳನ್ನು ಅಲ್ತಾಫ್ ಹುಸೇನ್ ಭದ್ರತಾ ಏಜೆನ್ಸಿಗಳಿಗೆ ಸೇರಿಸುತ್ತಿದ್ದರು.
ಇದನ್ನೂ ಓದಿ: ಡಜನ್ಗೂ ಹೆಚ್ಚು ಗ್ಯಾಂಗ್ಸ್ಟರ್ಗಳ ನಿವಾಸಗಳ ಮೇಲೆ ಎನ್ಐಎ ದಾಳಿ: ಅಪಾರ ಪ್ರಮಾಣದ ಮದ್ದುಗುಂಡು ವಶ