ಹೈದರಾಬಾದ್(ತೆಲಂಗಾಣ): ಹುಮಾಯೂನ್ ನಗರದಲ್ಲಿ ಆಹಾರ ವಿತರಣೆ ವಿಳಂಬ ಆದ ಕಾರಣಕ್ಕೆ ಸಿಟ್ಟಿಗೆದ್ದ ಗ್ರಾಹಕ ಮತ್ತು ಸಹಚರರು ಆಹಾರ ವಿತರಣಾ ಯುವಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ದಾಳಿಯಲ್ಲಿ ಫುಡ್ ಡೆಲಿವರಿ ಬಾಯ್ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸೋಮವಾರ ರಾತ್ರಿ ಹುಮಾಯೂನ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಸಾಬ್ ಟ್ಯಾಂಕ್‌ನಲ್ಲಿರುವ ಹೋಟೆಲ್ ಮುಂಭಾಗದಲ್ಲಿ ಆಹಾರ ವಿತರಣಾ ಅಪ್ಲಿಕೇಶನ್ ನ ಉದ್ಯೋಗಿಯ ಮೇಲೆ ಗ್ರಾಹಕ ಮತ್ತು ಅತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯುವಕ ತನ್ನನ್ನು ರಕ್ಷಿಸಿಕೊಳ್ಳಲು ಹೋಟೆಲ್ ಕಡೆಗೆ ಓಡಿದಾಗ ಆರೋಪಿಗಳು ಆತನನ್ನು ಬೆನ್ನಟ್ಟಿ ಹೋಗಿ ಥಳಿಸಿದ್ದಾರೆ.
ಅಲ್ಲಿ ಜಮಾಯಿಸಿದ ಸುಮಾರು 10 ರಿಂದ15 ಮಂದಿ ಫುಡ್ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆದಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಆಹಾರ ವಿತರಣಾ ಯುವಕ ಹೋಟೆಲ್ನ ಅಡುಗೆಮನೆಗೆ ಓಡಿದ್ದಾನೆ. ಆದರೆ ಗ್ಯಾಂಗ್ ಅವನನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದರು. ಈ ಗಲಾಟೆಯ ನಡುವೆ ಕುದಿಯುವ ಎಣ್ಣೆ ಫುಡ್ ಡೆಲಿವರಿ ಬಾಯ್ ಮತ್ತು ಇಬ್ಬರು ಹೋಟೆಲ್ ಉದ್ಯೋಗಿಗಳ ಮೇಲೆ ಬಿದ್ದಿದೆ. ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಫುಡ್ ಡೆಲಿವರಿ ಬಾಯ್ ಇಲ್ಯಾಸ್ ಮತ್ತು ಹೋಟೆಲ್ ಉದ್ಯೋಗಿಗಳಾದ ಸೋನು ಮತ್ತು ಸಜ್ಜನ್ ಹಲ್ಲೆಗೊಳಗಾದ ನೌಕರರು. ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಈ ಗಲಾಟೆಯನ್ನು ಅದೇ ದಾರಿಯಲ್ಲಿ ಹಾದು ಹೋಗುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಗಮನಿಸಿ ಹುಮಾಯೂನ್ ನಗರ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ಪ್ರಮುಖ ಆರೋಪಿ ಮತ್ತು ಅವರ ಮೂವರು ಪುತ್ರರು ಸೇರಿದಂತೆ ಐವರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ದಾಳಿಯಲ್ಲಿ ಭಾಗಿಯಾಗಿರುವ ಇತರರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ:'ಕುಡಿದು ವಾಹನ ಓಡಿಸಿದ್ದೆವು, ಯುವತಿ ಸಿಲುಕಿದ್ದು ಗೊತ್ತಿರಲಿಲ್ಲ': ದೆಹಲಿ ದುಷ್ಕೃತ್ಯದ ಆರೋಪಿಗಳ ಹೇಳಿಕೆ