ಬಕ್ಸಾರ್ (ಬಿಹಾರ್): ಇಲ್ಲಿನ ಗಂಗಾ ನದಿಯಲ್ಲಿ 50ಕ್ಕೂ ಹೆಚ್ಚು ಮೃತದೇಹಗಳು ಪತ್ತೆಯಾಗಿ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಹಲವು ಮೃತದೇಹಗಳು ಪತ್ತೆಯಾಗಿವೆ. ಕೆಲದಿನಗಳ ಹಿಂದೆ ಮೃತದೇಹಗಳು ಪತ್ತೆಯಾದ ಬೆನ್ನಲ್ಲೆ ನದಿಯಲ್ಲಿ ಹುಡುಕಾಟ ನಡೆಸಲಾಗಿತ್ತು.
ಇದೀಗ ಬಲ್ಲಿಯಾ ಜಿಲ್ಲೆಯ ನರ್ಹಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟ್ವಾ ನಾರಾಯಣಪುರದಲ್ಲಿ ಹರಿಯುವ ಗಂಗಾ ನದಿಯಲ್ಲಿ 14ರಿಂದ 15 ಮೃತದೇಹಗಳು ಪತ್ತೆಯಾಗಿವೆ.
ನದಿಯಲ್ಲಿ ತೇಲಿಬರುತ್ತಿರುವ ಶವಗಳ ಕಂಡು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಈ ಸ್ಥಳದಲ್ಲಿ ಇತ್ತೀಚಿನ ದಿನದವರೆಗೂ 2 ರಿಂದ 3 ಶವಗಳು ಸಾಮಾನ್ಯವಾಗಿ ತೇಲಿ ಬರುತ್ತಿದ್ದವು. ಆದರೆ, ಇದೀಗ ಶವಗಳ ಸಂಖ್ಯೆ ಹೆಚ್ಚುತ್ತಲಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಇದಕ್ಕೂ ಮುನ್ನ ಬಿಹಾರದ ಬಕ್ಸಾರ್ ಜಿಲ್ಲೆಯ ಮಹಾದೇವ ಘಾಟ್‌ನಲ್ಲಿ ಮತ್ತು ಘಾಜಿಪುರದ ಬಾರಾ ಮತ್ತು ಗಹ್ಮರ್ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯ ಮೃತ ದೇಹಗಳು ಪತ್ತೆಯಾಗಿತ್ತು.
ಮಧ್ಯ ಪ್ರದೇಶದ ನದಿಯಲ್ಲೂ ಮೃತದೇಹ
ಇದೀಗ ಮಧ್ಯ ಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಹರಿಯುವ ರನ್ಜಾ ನದಿಯಲ್ಲಿ ಸುಮಾರು 6 ಶವಗಳು ಪತ್ತೆಯಾಗಿವೆ. ಇದ್ದಕ್ಕಿದ್ದಂತೆ ಮೃತದೇಹಗಳು ತೇಲುತ್ತಿರುವುದ ಕಂಡು ಗ್ರಾಮಸ್ಥರಲ್ಲಿ ಭೀತಿ ಉಂಟಾಗಿದೆ. ಆದರೆ ಇವು ಕೋವಿಡ್ ಸೋಂಕಿತರ ದೇಹಗಳೆಂದು ಪೊಲೀಸರು ಇನ್ನೂ ದೃಢಪಡಿಸಿಲ್ಲ.