ಚೆನ್ನೈ: ಬಾಡಿಗೆ ಚಾಲಕನೋರ್ವನ ಬ್ಯಾಂಕ್ ಖಾತೆಗೆ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್ನಿಂದ 9 ಸಾವಿರ ಕೋಟಿ ರೂಪಾಯಿ ಜಮಾ ಆಗಿರುವ ಘಟನೆ ಇದೀಗ ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿದೆ. ಈ ಬಗ್ಗೆ ಕಾರು ಚಾಲಕ ಹಾಗೂ ಬ್ಯಾಂಕ್ ಕಡೆಯಿಂದ ಲಾಯರ್ಗಳು ಮಧ್ಯಸ್ಥಿಕೆವಹಿಸಿ ರಾಜಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಪಳನಿ ನೇಯ್ಕಪಟ್ಟಿ ನಿವಾಸಿ ರಾಜಕುಮಾರ್, ಕೋಡಂಬಾಕ್ಕಂನಲ್ಲಿ ಸ್ನೇಹಿತರೊಬ್ಬರ ರೂಂನಲ್ಲಿದ್ದು, ಬಾಡಿಗೆ ಬಾಡಿಗೆ ಕಾರು ಓಡಿಸುತ್ತಿದ್ದಾರೆ. ಸೆ. 9 ರಂದು ಮಧ್ಯಾಹ್ನ 3 ಗಂಟೆ ಹೊತ್ತಿಗೆ ರಾಜಕುಮಾರ್ ಅವರು ತಮ್ಮ ಕಾರಿನಲ್ಲಿ ಮಲಗಿದ್ದಾಗ ಮೊಬೈಲ್ಗೆ ಮೆಸೇಜ್ ಬಂದಿದೆ. ರಾಜಕುಮಾರ್ ಅವರ ಬ್ಯಾಂಕ್ ಖಾತೆಗೆ ಮರ್ಕೆಂಟೈಲ್ ಬ್ಯಾಂಕ್ನಿಂದ 9 ಸಾವಿರ ಕೋಟಿ ರೂಪಾಯಿ ಜಮಾ ಆಗಿದೆ ಎಂದು ಮೆಸೇಜ್ ಮೂಲಕ ತಿಳಿಸಲಾಗಿತ್ತು.
ಅದರಲ್ಲಿದ್ದ ಸೊನ್ನೆಗಳನ್ನು ಲೆಕ್ಕ ಹಾಕಲಾಗದೆ ಎಷ್ಟು ಹಣ ಬಂದಿದೆ ಎಂದು ಗೊಂದಲದಲ್ಲಿದ್ದ ರಾಜಕುಮಾರ್, ಯಾರೋ ಮೋಸ ಮಾಡಲೆಂದೇ ಈ ರೀತಿಯ ಮೆಸೇಜ್ ಕಳುಹಿಸಿದ್ದಾರೆ, ತಮ್ಮ ಖಾತೆಯಲ್ಲಿ 15 ರೂಪಾಯಿ ಮಾತ್ರ ಇದೆ ಎಂದುಕೊಂಡಿದ್ದರು. ಆದರೂ ಒಂದು ಬಾರಿ ನೋಡೋಣ ಎಂದು ತಮ್ಮ ಸ್ನೇಹಿತರೊಬ್ಬರಿಗೆ 21 ಸಾವಿರ ರೂಪಾಯಿ ಕಳುಹಿಸಿದ್ದಾರೆ. ಆಗ ನಿಜವಾಗಿಯೂ ಅವರ ಖಾತೆಗೆ 9 ಸಾವಿರ ಕೋಟಿ ರೂಪಾಯಿ ಹಣ ಬಂದಿರುವುದು ನಿಜ ಎಂದು ನಂಬಿ ಖುಷಿಯಾಗಿದ್ದಾರೆ.
ಆದರೆ ಅಷ್ಟರಲ್ಲಿ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್ನ ಕೇಂದ್ರ ಕಚೇರಿ ತೂತುಕುಡಿಯಿಂದ ರಾಜಕುಮಾರ್ ಅವರಿಗೆ ದೂರವಾಣಿ ಕರೆ ಬಂದಿದೆ. ಫೋನ್ ಮಾಡಿದವರು ತಪ್ಪಾಗಿ ನಿಮ್ಮ ಖಾತೆಗೆ 9 ಸಾವಿ ಕೋಟಿ ಹಣ ಜಮೆಯಾಗಿದೆ. ಬ್ಯಾಂಕ್ನಿಂದ ಜಮೆ ಆಗಿರುವ ಹಣವನ್ನು ಖರ್ಚು ಮಾಡದಂತೆ ಬ್ಯಾಂಕ್ ಆಡಳಿತ ಮಂಡಳಿ ರಾಜಕುಮಾರ್ ಅವರಿಗೆ ತಿಳಿಸಿದೆ.
ರಾಜಕುಮಾರ್ ಅವರು ಸ್ನೇಹಿತನಿಗೆ ಕಳುಹಿಸಿದ 21 ಸಾವಿರ ಹೊರತುಪಡಿಸಿ, ಉಳಿದ ಎಲ್ಲಾ ಹಣವನ್ನು ತಕ್ಷಣವೇ ಹಿಂಪಡೆದಿದೆ. ಇದಾದ ನಂತರ ಬ್ಯಾಂಕ್ನವರು ಉಳಿದ 21 ಸಾವಿರ ರೂಪಾಯಿಯನ್ನು ಹಿಂತಿರುಗಿಸುವಂತೆ ರಾಜಕುಮಾರ್ ಅವರಿಗೆ ಬೆದರಿಕೆ ಹಾಕಲು ಆರಂಭಿಸಿತ್ತು ಎನ್ನಲಾಗಿದೆ. ರಾಜಕುಮಾರ್ ಅವರು ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ. ಆದರೆ ನಂತರ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್ನ ಕಡೆಯಿಂದ ಹಾಗೂ ಕಾರು ಚಾಲಕ ರಾಜಕುಮಾರ್ ಕಡೆಯಿಂದ ವಕೀಲರು ಚೆನ್ನೈನ ತ್ಯಾಗರಾಯನಗರದಲ್ಲಿರುವ ಶಾಖೆಗೆ ತೆರಳಿ ಸಂಧಾನ ಮಾತುಕತೆ ನಡೆಸಿದ್ದಾರೆ.
ಸಂಧಾನ ಮಾತುಕತೆಯಲ್ಲಿ ಬ್ಯಾಂಕ್ನವರು ರಾಜಕುಮಾರ್ ಅವರು ಈಗಾಗಲೇ 9 ಸಾವಿರ ಕೋಟಿ ರೂಪಾಯಿಯಲ್ಲಿ ಸ್ನೇಹಿತನಿಗೆ ನೀಡಿದ 21 ಸಾವಿರ ರೂಪಾಯಿಯನ್ನು ಹಿಂತಿರುಗಿಸುವುದು ಬೇಡ ಎನ್ನುವುದರ ಜೊತೆಗೆ ಅವರಿಗೆ ವಾಹನ ಸಾಲವನ್ನು ನೀಡುವುದಾಗಿಯೂ ಹೇಳಿದ್ದಾರೆ. ಆದರೆ ರಾಜಕುಮಾರ್ ಆ ಆಫರ್ ಅನ್ನು ಸ್ವೀಕರಿಸಿಲ್ಲ ಎಂದು ವರದಿಯಾಗಿದೆ. ಒಬ್ಬ ಕಾರು ಚಾಲಕನ ಖಾತೆಗೆ ಏಕಾಏಕಿ 9 ಸಾವಿರ ಕೋಟಿ ಹಣ ಜಮೆ ಆಗಿರುವುದು ಭಾರಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ : ಹಾಲಶ್ರೀ ವಿಚಾರಣೆ ಚುರುಕಾದ ಬೆನ್ನಲೇ ಕಂತೆ ಕಂತೆ ಹಣ ಪತ್ತೆ.. ವಿಡಿಯೋ ಮಾಡಿ ಸಿಸಿಬಿಗೆ ಪತ್ರ ಬರೆದ ವ್ಯಕ್ತಿ