ತಿರುನಲ್ವೇಲಿ(ತಮಿಳುನಾಡು): ಸಾಕಲು ಸಾಧ್ಯವಿಲ್ಲ ಎಂದು ಅಜ್ಜಿಯೊಬ್ಬರನ್ನು ಇಬ್ಬರು ಮೊಮ್ಮಕ್ಕಳು ಬೆಂಕಿ ಹಚ್ಚಿ ಕೊಂದ ಘಟನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪೇಟ್ಟೈ ಎಂಬಲ್ಲಿ ನಡೆದಿದೆ. ಮೇ 3ರಂದು ಪೇಟ್ಟೈನ ಆಧಾಂ ನಗರದ ರಸ್ತೆಯ ಕಸದ ರಾಶಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿ ಶವ ಹೊರತೆಗೆದು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಈ ವಿಚಾರವಾಗಿ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಶವ ಪತ್ತೆಯಾದ ಆಧಾಂ ನಗರ್ನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ತನಿಖೆ ವೇಳೆ ಪರಿಶೀಲನೆ ನಡೆಸಿದ್ದು, ಈ ವೇಳೆ, ಓರ್ವ ಆಟೋ ಚಾಲಕನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ಮೃತದೇಹವನ್ನು ಸುಬ್ಬಮ್ಮಳ್ (90) ಎಂದು ಗುರುತಿಸಲಾಗಿದ್ದು, ಆಕೆಯ ಮೊಮ್ಮಗಳಾದ ಮರಿಯಮ್ಮಾಳ್ ಮತ್ತು ಮೇರಿ ಎಂಬ ಇಬ್ಬರು ಮೊಮ್ಮಕ್ಕಳು ಸುಬ್ಬಮ್ಮಾಳ್ ಅವರನ್ನು ನೋಡಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.
ಅಜ್ಜಿ ಹೊರೆ ಎಂದು ಭಾವಿಸಿದ ಮರಿಯಮ್ಮಾಳ್ ಮತ್ತು ಮೇರಿ ಅಜ್ಜಿಯನ್ನು ಕೊಲ್ಲಲು ನಿರ್ಧರಿಸಿದ್ದಾರೆ. ನಂತರ ಅಧಾಂ ನಗರಕ್ಕೆ ತೆರಳಿ ಅಜ್ಜಿಯನ್ನು ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಸುಟ್ಟು ಕೊಂದ ನಂತರ ಮೃತದೇಹವನ್ನು ಕಸದ ರಾಶಿಗೆ ಎಸೆದು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈಗ ಇಬ್ಬರೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬಾಯ್ಫ್ರೆಂಡ್ ಮದುವೆಯಾಗಲು ದೈಹಿಕ ಸಂಪರ್ಕದ ವೇಳೆ ಕಾಂಡೋಮ್ಗೆ ರಂಧ್ರ ಮಾಡಿದ ಯುವತಿ