ಜೈಪುರ(ರಾಜಸ್ಥಾನ): ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿರುವುದರಿಂದ ರಾಜ್ಯ ಕಾಂಗ್ರೆಸ್ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಚಿನ್ ಪೈಲಟ್ರನ್ನು ಮುಖ್ಯಮಂತ್ರಿ ಮಾಡುವ ವಿಚಾರವನ್ನು ಶಾಸಕರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ನಡೆದ ಸಭೆಯಲ್ಲಿ ಪೈಲಟ್ ಹೆಸರು ಕೇಳಿ ಬರುತ್ತಿದ್ದಂತೆ 76 ಶಾಸಕರು ಸ್ಪೀಕರ್ ಸಿ ಪಿ ಜೋಷಿ ಅವರಿಗೆ ರಾಜೀನಾಮೆ ನೀಡಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಕಾಂಗ್ರೆಸ್ ಸಿದ್ಧಾಂತಕ್ಕೆ ಅನುಗುಣವಾಗಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಮುನ್ನ ಅಶೋಕ್ ಗೆಹ್ಲೋಟ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿತ್ತು. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜಸ್ಥಾನದ ಎಐಸಿಸಿ ಉಸ್ತುವಾರಿ ಅಜಯ್ ಮಕೇನ್ ಜೈಪುರಕ್ಕೆ ತೆರಳಿದ್ದರು.
ಶಾಸಕಾಂಗ ಸಭೆಯಲ್ಲಿ ಒಟ್ಟು 76 ಶಾಸಕರು ಸ್ಪೀಕರ್ ಸಿ ಪಿ ಜೋಶಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. 2020ರಲ್ಲಿ ಸರ್ಕಾರವನ್ನು ಬೀಳಿಸಲು ಯತ್ನಿಸಿದ ಯಾವುದೇ ನಾಯಕರನ್ನು ರಾಜಸ್ಥಾನದ ಮುಖ್ಯಮಂತ್ರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಶಾಸಕರು ಸ್ಪಷ್ಟವಾಗಿ ಹೇಳಿದ್ದಾರೆ.
ಕೆಲ ಶಾಸಕರ ಮೇಲೆ ಕ್ರಮ ಸಾಧ್ಯತೆ: ರಾಜಸ್ಥಾನದಲ್ಲಿ ಕಾಂಗ್ರೆಸ್ ಶಾಸಕರು ಬಂಡಾಯವೆದ್ದ ರೀತಿಯಿಂದ ಕಾಂಗ್ರೆಸ್ ಹೈಕಮಾಂಡ್ ಕೆರಳಿದೆ. ಇದೇ ಕಾರಣಕ್ಕೆ ಕೆಲ ಶಾಸಕರ ಮೇಲೆ ಕ್ರಮ ಸಾಧ್ಯತೆ ಇದೆ. ರಾಜೀನಾಮೆ ನೀಡಲು ಮೊದಲ ಸಾಲಿನಲ್ಲಿ ಬರುವ ಶಾಸಕರ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳಬಹುದು ಎನ್ನಲಾಗುತ್ತಿದೆ.
ಈಗ 19ರ ಮೊದಲು ಯಾವುದೇ ಮಾತುಕತೆ ಇಲ್ಲ- ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆಯಾಗುವವರೆಗೂ ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ಶಾಸಕರು ಕಾಂಗ್ರೆಸ್ ಹೈಕಮಾಂಡ್ ಮುಂದೆ ಸ್ಪಷ್ಟವಾಗಿ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾನುವಾರ ಶಾಸಕಾಂಗ ಪಕ್ಷದ ಸಭೆ ನಡೆಸಲು ಸಾಧ್ಯವಾಗಲಿಲ್ಲ.
ಓದಿ: ರಾಜಸ್ಥಾನದಲ್ಲಿ ದಿಢೀರ್ ಬೆಳವಣಿಗೆ: ಸಿಎಂ ಗೆಹ್ಲೋಟ್ ಬೆಂಬಲಿಸಿ ರಾಜೀನಾಮೆಗೆ ಮುಂದಾದ 92 ಶಾಸಕರು