ನವದೆಹಲಿ: ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಭಾಗವಾಗಿ ಇಂದಿನಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವಯಸ್ಕರರಿಗೆ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. 75ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕೋವಿಡ್ ಬೂಸ್ಟರ್ ಡೋಸ್ ಅನ್ನು ಉಚಿತವಾಗಿ ನೀಡುತ್ತಿರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಇಂದಿನಿಂದ 75 ದಿನಗಳವರೆಗೆ ವಿಶೇಷ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ನಡೆಯಲಿದ್ದು, ಎರಡನೇ ಡೋಸ್ ಪಡೆದು 6 ತಿಂಗಳು ಪೂರ್ಣಗೊಳಿಸಿದವರು ಸಮೀಪದ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಲಸಿಕೆ ಪಡೆಯಬಹುದು.
ಗುರುವಾರ ರಾಜ್ಯ ಆರೋಗ್ಯ ಕಾರ್ಯದರ್ಶಿಗಳು ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಎಂಡಿಗಳೊಂದಿಗೆ ವರ್ಚುವಲ್ ಸಭೆ ನಡೆಸಿ ಬಳಿಕ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ಎಲ್ಲಾ ಅರ್ಹ ಫಲಾನುಭವಿಗಳಿಗೆ ಕೊರೊನಾ ಬೂಸ್ಟರ್ ಡೋಸ್ ನೀಡುವ ಕುರಿತು ಮತ್ತು ಲಸಿಕಾ ವ್ಯಾಪ್ತಿಯನ್ನು ವಿಸ್ತರಿಸುವಂತೆ ಒತ್ತಾಯಿಸಿದರು.
ಶಾಲೆ- ಕಾಲೇಜುಗಳು, ರೈಲು ನಿಲ್ದಾಣ, ಕೈಗಾರಿಕಾ ಸಂಸ್ಥೆಗಳು, ಅಂತಾರಾಜ್ಯ ಬಸ್ ನಿಲ್ದಾಣಗಳು, ಚಾರ್ ಧಾಮ್ ಯಾತ್ರೆ, ಅಮರನಾಥ ಯಾತ್ರೆ ಮತ್ತು ಕನ್ವರ್ ಯಾತ್ರೆ (ಉತ್ತರ ಭಾರತದ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶ) ಹಾಗೂ ಪ್ರಮುಖ ಮೇಳಗಳು ಮತ್ತು ಸಭೆಗಳ ಮಾರ್ಗಗಳಲ್ಲಿ ವಿಶೇಷ ಲಸಿಕಾ ಶಿಬಿರಗಳನ್ನು ನಡೆಸುವಂತೆ ಶಿಫಾರಸು ಮಾಡಲಾಗಿದೆ.
ಮೊಬೈಲ್ ನಂಬರ್‌ನೊಂದಿಗೆ ತೆರಳಿ: ಮೂರನೇ ಡೋಸ್ ಪಡೆಯುವವರು ಈ ಹಿಂದೆ ಮೊದಲ ಎರಡು ಡೋಸ್ ಪಡೆಯುವ ವೇಳೆ ನೀಡಿದ್ದ ಮೊಬೈಲ್ ನಂಬರ್ ನೀಡಿ ಸ್ಥಳದಲ್ಲಿಯೇ ನೋಂದಣಿ ಮಾಡಿಸಿ ಮೂರನೇ ಡೋಸ್ ಪಡೆಯಬಹುದು. ನೋಂದಣಿ ಸಂದರ್ಭದಲ್ಲಿಯೇ ಮೊದಲೆರಡು ಡೋಸ್ ಯಾವ ಲಸಿಕೆ ನೀಡಲಾಗಿತ್ತು ಎಂಬ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಮೂರನೇ ಡೋಸ್ ಆಗಿ ಅದೇ ಲಸಿಕೆಯನ್ನು ನೀಡಲಾಗುತ್ತದೆ.
ಈ ವರ್ಷದ ಏಪ್ರಿಲ್ 10 ರಂದು ಭಾರತವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್-19 ಲಸಿಕೆಗಳ ಬೂಸ್ಟರ್ ಡೋಸ್‌ಗಳನ್ನು ನೀಡಲು ಪ್ರಾರಂಭಿಸಿತು. ಕಳೆದ ವರ್ಷ ಜನವರಿ 16 ರಂದು ದೇಶಾದ್ಯಂತ ವ್ಯಾಕ್ಸಿನೇಷನ್ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಡೋಸ್‌ಗಳನ್ನು ನೀಡಲಾಗಿತ್ತು. ನಂತರ ಮುಂಚೂಣಿ ಕಾರ್ಯಕರ್ತರಿಗೆ ಕಳೆದ ವರ್ಷದ ಫೆಬ್ರವರಿ 2 ರಿಂದ ಲಸಿಕೆ ನೀಡಲು ಆರಂಭಿಸಲಾಗಿತ್ತು. ಕಳೆದ ವರ್ಷ ಮಾರ್ಚ್ 1 ರಂದು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕಾ ನೀಡುವ ಕಾರ್ಯಕ್ರಮ ಆರಂಭಿಸಲಾಗಿತ್ತು.
ಇದನ್ನೂ ಓದಿ: ಶುಕ್ರವಾರದಿಂದ ಮುಂದಿನ 75ದಿನ ಉಚಿತ ಕೋವಿಡ್ ಬೂಸ್ಟರ್ ಡೋಸ್.. ಕೇಂದ್ರದ ಮಹತ್ವದ ನಿರ್ಧಾರ