ವಿಶಾಖಪಟ್ಟಣಂ: ಜನ್ಮದಿನ, ಮದುವೆಯನ್ನು ವಿಶೇಷವಾಗಿ ಆಚರಣೆ ಮಾಡಿಕೊಳ್ಳುವುದು ಈಗ ಹೆಚ್ಚಾಗಿದೆ. ಆಂಧ್ರಪ್ರದೇಶದ ನವ ಜೋಡಿಯೊಂದು ಮದುವೆಯ ಹಿನ್ನೆಲೆಯಲ್ಲಿ ಅಂಗಾಂಗ ದಾನಕ್ಕೆ ಒಪ್ಪಿಕೊಂಡಿದ್ದಾರೆ. ಇದಲ್ಲದೇ 60 ಮಂದಿ ಅತಿಥಿಗಳೂ ಕೂಡ ದೇಹದಾನಕ್ಕೆ ರೆಡಿಯಾಗಿದ್ದಾರೆ.
ಪೂರ್ವ ಗೋದಾವರಿ ಜಿಲ್ಲೆಯ ನಿಡದವೋಲು ಸಮೀಪದ ವೇಲಿವೆನ್ನು ಗ್ರಾಮದ ಸತೀಶ್ ಕುಮಾರ್, ಭಾವಿ ಪತ್ನಿ ಸಜೀವ ರಾಣಿ ಜೊತೆಗೂಡಿ ಅಂಗಾಂಗ ದಾನದ ಖಾತ್ರಿ ದಾಖಲೆಗೆ ಸಹಿ ಹಾಕಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವರ್ಷಾಂತ್ಯದ 29ರಂದು ನಿಡದವೋಲುವಿನಲ್ಲಿ ನಡೆಯಲಿರುವ ವಿವಾಹ ಸಮಾರಂಭದಲ್ಲಿ ಸಾವಿತ್ರಿಬಾಯಿ ಫುಲೆ ಎಜುಕೇಶನ್ ಅಂಡ್ ಚಾರಿಟಬಲ್ ಟ್ರಸ್ಟ್ ನವಜೋಡಿ ಮತ್ತು ದಾನಿಗಳಿಂದ ದೇಹದಾನ ದಾಖಲೆಗೆ ಒಪ್ಪಿಗೆ ಪಡೆಯಲಿದ್ದಾರೆ.
ವಧು - ವರರಿಬ್ಬರೂ ಮದುವೆಯ ವೇಳೆ ವಿನೂತನವಾಗಿ ಏನಾದರೂ ಮಾಡಲು ನಿರ್ಧರಿಸಿದ್ದರು. ಅದರಂತೆ ಮೃತಪಟ್ಟ ಬಳಿಕ ದೇಹ ಕೊಳೆತು ಹೋಗುವ ಬದಲು ಇನ್ನೊಬ್ಬರಿಗೆ ನೆರವಾಗುವಂತೆ ಅಂಗಾಂಗ ದಾನ ಮಾಡುವ ಯೋಚನೆ ಮಾಡಿದ್ದಾರೆ.
ನವಜೋಡಿಯ ಈ ಆಲೋಚನೆ ಕುಟುಂಬದವರಿಗೆ ಸೇರಿದಂತೆ ಬಂಧುಗಳಿಗೆ ಮೆಚ್ಚುಗೆಯಾಗಿದೆ. ಸಂಬಂಧಿಕರು ಮತ್ತು ಸ್ನೇಹಿತರು ಸೇರಿ ಸುಮಾರು 60 ಮಂದಿ ಅಂಗಾಂಗ ದಾನ ಮಾಡಲು ತಾವು ಸಿದ್ಧ ಎಂದು ಮುಂದೆ ಬಂದಿದ್ದಾರೆ. ಈ ವಿಶೇಷ ಕಾರ್ಯಕ್ರಮಕ್ಕಾಗಿ ವರ ಸತೀಶ್ ಕುಮಾರ್ ಅವರು ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ‘ಅಂಗಾಂಗ ದಾನ ಮಾಡಿ- ನಿರ್ಗತಿಕರಿಗೆ ಜೀವ ನೀಡಿ’ ಎಂದು ಮುದ್ರಿಸಿ ಉತ್ತೇಜನ ನೀಡಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
‘ವಿಲ್ಲಿಂಗ್ ಟು ಹೆಲ್ಪ್ ಫೌಂಡೇಶನ್’ನ ಸಂಘಟಕರಾದ ನಿಖಿಲ್ ಮತ್ತು ಪೂಜಿತಾ ಅವರ ಸಲಹೆಯಂತೆ ಈ ನಿರ್ಧಾರಕ್ಕೆ ಬಂದಿದ್ದೇವೆ. ಅಂಗಾಂಗ ದಾನದಿಂದ ಹಲವಾರು ಜೀವಗಳನ್ನು ಉಳಿಸಬಹುದು ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮ ಆರಂಭಿಸಿದ್ದೇನೆ ಎಂದು ವರ ಸತೀಶ್ ಕುಮಾರ್ ‘ಈಟಿವಿ ಭಾರತ್’ಗೆ ತಿಳಿಸಿದರು.
ಓದಿ: ಮಾನವನಿಗೆ ಚಂದ್ರ ಮತ್ತಷ್ಟು ಹತ್ತಿರ... ಮಂಗಳದ ಅಧ್ಯಯನಕ್ಕೆ ನಾಸಾದ ಪ್ರಯತ್ನ ಏನು?