ಪ್ರಯಾಗರಾಜ್ (ಉತ್ತರ ಪ್ರದೇಶ): ಪವಿತ್ರ ಗಂಗಾ, ಯಮುನಾ ಮತ್ತು ಅತೀಂದ್ರಿಯ ಸರಸ್ವತಿಯ ನದಿ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಸ್ನಾನಕ್ಕೆಂದು ತೆರಳಿದ್ದ ಐವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಭಾನುವಾರ ಸಂಜೆ 6.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಸಂಗಮ ನಗರಿಯಲ್ಲಿ ಭಾನುವಾರ ಭಾರಿ ಬಿರುಗಾಳಿ ಬೀಸಿದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಭಾನುವಾರ ಸಂಜೆ 15 ವಿದ್ಯಾರ್ಥಿಗಳು ಗಂಗಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದರು. ಈ ಪೈಕಿ 9 ವಿದ್ಯಾರ್ಥಿಗಳು ಸ್ನಾನ ಮಾಡುವಾಗ ಆಳದ ನೀರಿನಲ್ಲಿ ಮುಳುಗಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ "ಈ ಸಮಯದಲ್ಲಿ ಬಲವಾದ ಬಿರುಗಾಳಿ ಬೀಸುತ್ತಿತ್ತು. ಗಾಳಿಯ ರಭಸಕ್ಕೆ ನೀರಿನ ಹರಿವು ತೀವ್ರಗೊಂಡಿದೆ. ಪ್ರವಾಹದ ಸೆಳೆತಕ್ಕೆ ಸಿಲುಕಿ ಸ್ನಾನ ಮಾಡುತ್ತಿದ್ದ 9 ಮಂದಿ ನೀರಿನಲ್ಲಿ ಮುಳುಗಲಾರಂಭಿಸಿದ್ದಾರೆ. ತಕ್ಷಣ ನೀರಿಗೆ ಇಳಿದ ಘಾಟ್‌ನಲ್ಲಿದ್ದ ಜಲಸಂಪನ್ಮೂಲ ಪೊಲೀಸ್ ಸಿಬ್ಬಂದಿ ಮತ್ತು ಡೈವರ್‌ಗಳು ನಾಲ್ವರನ್ನು ರಕ್ಷಿಸುವಲ್ಲಿ ಯಶಸ್ವಿ ಆಗಿದ್ದರು. ಆದರೆ, ಇತರ ಐದು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿದರು". ಮಾಹಿತಿ ಮೇರೆಗೆ ದಾರಗಂಜ್ ಪೊಲೀಸರೊಂದಿಗೆ ಎನ್‌ಡಿಆರ್‌ಎಫ್ ತಂಡ ಆಗಮಿಸಿ ಮುಳುಗಿದವರಿಗಾಗಿ ಶೋಧ ಕಾರ್ಯ ಆರಂಭಿಸಿದೆ. ಸುಮಾರು ಎರಡೂವರೆ ಗಂಟೆಗಳ ಕಾಲ ಹುಡುಕಾಟ ನಡೆಸಿದರೂ ಯಶಸ್ವಿಯಾಗಿಲ್ಲ ಎಂದು ತಿಳಿದು ಬಂದಿದೆ.
ನಾಪತ್ತೆಯಾದವರನ್ನು ಮಹೇಶ್ವರ್ ವರ್ಮಾ, ಸುಮಿತ್ ವಿಶ್ವಕರ್ಮ, ವಿಶಾಲ್ ವರ್ಮಾ, ಉತ್ಕರ್ಷ್ ಕುಮಾರ್ ಗೌತಮ್ ಹಾಗೂ ಅಭಿಷೇಕ್ ಅಗ್ರಹಾರಿ ಎಂದು ಗುರುತಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳು 17 ರಿಂದ 22 ವರ್ಷದವರು. ಇವರು ದರಗಂಜ್ ಮತ್ತು ಜಾರ್ಜ್‌ಟೌನ್ ಬಳಿ ಬಾಡಿಗೆಗೆ ಇದ್ದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮುಳುಗುತ್ತಿದ್ದ ತಮ್ಮನನ್ನು ರಕ್ಷಿಸಲು ಹೋದ ಮೂವರು ಸಹೋದರಿಯರೂ ನೀರುಪಾಲು!
ಮೂವರು ವಿದ್ಯಾರ್ಥಿಗಳು ನೀರುಪಾಲು: ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿತ್ತು. ಎಲೆಕ್ಟ್ರಾನಿಕ್ ಸಿಟಿಯ 2ನೇ ಹಂತದ ನೀಲಾದ್ರಿ ಬಳಿಯ ಕ್ವಾರಿಯಲ್ಲಿ ಈ ಘಟನೆ ನಡೆದಿದ್ದು, ಮೂವರೂ 10 ನೇ ತರಗತಿಯಲ್ಲಿ ಓದುತ್ತಿದ್ದರು ಎಂದು ತಿಳಿದು ಬಂದಿದೆ. ಮೃತ ವಿದ್ಯಾರ್ಥಿಗಳನ್ನು ಕಿರಣ್ (13) ತೀರ್ಥ(13) ಹಾಗೂ ಫೈಜಲ್ (14) ಎಂದು ಗುರುತಿಸಲಾಗಿತ್ತು.
ಸಂಜೆ ವೇಳೆಗೆ ಆಟ ಆಡಲು ಹೋಗಿದ್ದ ತೀರ್ಥ ಮತ್ತು ಫೈಜಲ್ ರಾತ್ರಿ ಆದರೂ ಮನೆಗೆ ಬಾರದ ಹಿನ್ನೆಲೆ ಪೋಷಕರು ಎಲ್ಲ ಕಡೆ ಹುಡುಕಾಡಿದ್ದಾರೆ. ಇದಾದ ನಂತರ ಕೆರೆ ಬಳಿ ಬಾಲಕರ ಸೈಕಲ್, ಬಟ್ಟೆ ಮತ್ತು ಚಪ್ಪಲಿ ಪತ್ತೆಯಾಗಿವೆ. ಈಜು ಬಾರದಿದ್ದರು ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲು