ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲೂ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ನಿತ್ಯ ಸಾವಿರಾರು ಹೊಸ ಕೇಸ್ ಪತ್ತೆಯಾಗುತ್ತಿವೆ. ಇದರ ಮಧ್ಯೆ ಇದೀಗ ಒಂದೇ ಆಸ್ಪತ್ರೆಯ 37 ವೈದ್ಯರಲ್ಲಿ ಮಹಾಮಾರಿ ಕಾಣಿಸಿಕೊಂಡಿದೆ.
ರಾಜಧಾನಿ ದೆಹಲಿಯಲ್ಲಿರುವ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿನ 37 ವೈದ್ಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇದರಲ್ಲಿ ಅರ್ಧಕ್ಕೂ ಹೆಚ್ಚು ವೈದ್ಯರು ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡಿದ್ದರು ಎಂದು ತಿಳಿದು ಬಂದಿದ್ದು, ಇದರ ಹೊರತಾಗಿಯೂ ವೈದ್ಯರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಇದನ್ನೂ ಓದಿ: ಕೊರೊನಾ 2ನೇ ಅಲೆ ಅಪಾಯ: ನೈಟ್ ಕರ್ಫ್ಯೂ ಅಲ್ಲ, ಕೊರೊನಾ ಕರ್ಪ್ಯೂ ಅನ್ನಿ: ಮೋದಿ ಕರೆ
ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಆಸ್ಪತ್ರೆ ಅಧಿಕಾರಿಗಳು ಎಲ್ಲ ವೈದ್ಯರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ 32 ವೈದ್ಯರು ಹೋಂ ಕ್ವಾರಂಟೈನ್ ಆಗಿದ್ದು, 5 ವೈದ್ಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಎಲ್ಲ ವೈದ್ಯರಲ್ಲೂ ಸಣ್ಣ ಪ್ರಮಾಣದ ಕೊರೊನಾ ಗುಣಲಕ್ಷಣ ಕಂಡು ಬಂದಿದ್ದು, ಯಾವುದೇ ರೀತಿಯಲ್ಲೂ ಚಿಂತಿಸಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಕಳೆದ 24 ಗಂಟೆಯಲ್ಲಿ ದಾಖಲೆಯ 7,400 ಕೋವಿಡ್ ಕೇಸ್ ಕಾಣಿಸಿಕೊಂಡಿದ್ದು, 24 ಜನರು ಸಾವನ್ನಪ್ಪಿದ್ದಾರೆ. ಈಗಾಗಲೇ ದೆಹಲಿಯಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದೆ.