ಸೂರತ್(ಗುಜರಾತ್) : ಸೂರತ್ ನಗರದ ರಸ್ತೆಗಳಲ್ಲಿ ಗುಟ್ಕಾ ತಿಂದು ಉಗುಳುವವರ ವಿರುದ್ಧ ಕ್ರಮಕೈಗೊಳ್ಳಲು ನಗರ ಪಾಲಿಕೆ ಮುಂದಾಗಿದೆ. ಈ ಸಂಬಂಧ ನಗರದ ರಸ್ತೆಗಳಲ್ಲಿ ಗುಟ್ಕಾ, ಪಾನ್ ಮಸಾಲ ತಿಂದು ಉಗುಳುವವರನ್ನು ಪತ್ತೆ ಹಚ್ಚಲು ನಗರದೆಲ್ಲೆಡೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಸೂರತ್ ನಗರ ಪಾಲಿಕೆಯು ನಗರವನ್ನು ಅಂದವಾಗಿಡಲು ವಿವಿಧ ಕ್ರಮಗಳನ್ನು ಕೈಗೊಂಡಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲೂ ಸೂರತ್ ನಗರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ನಗರವನ್ನು ಚಂದಗಾಣಿಸಲು ಇಲ್ಲಿನ ರಸ್ತೆಗಳ ಬದಿಯಲ್ಲಿನ ಗೋಡೆಗಳಿಗೆ, ಸೇತುವೆಗಳಿಗೆ, ರಸ್ತೆ ವಿಭಜಕಗಳಿಗೆ, ಟ್ರಾಫಿಕ್ ವೃತ್ತಗಳಿಗೆ ಬಣ್ಣಗಳನ್ನು ಬಳೆಯಲಾಗಿದೆ.
3250 ಸಿಸಿಟಿವಿ ಕ್ಯಾಮರಾ ಅಳವಡಿಕೆ : ಆದರೆ ಕೆಲ ವಾಹನ ಸವಾರರು ಗುಟ್ಕಾ, ಪಾನ್ ಮಸಾಲ ತಿಂದು ರಸ್ತೆಗಳಲ್ಲೇ ಉಗುಳುತ್ತಿರುವುದು ನಗರದ ಸೌಂದರ್ಯವನ್ನು ಹಾಳು ಮಾಡುತ್ತಿದೆ. ಅಲ್ಲದೆ ಟ್ರಾಫಿಕ್ ಸ್ಥಳಗಳಲ್ಲಿ, ಪಾದಚಾರಿ ರಸ್ತೆಗಳಲ್ಲಿ ವಿವಿಧೆಡೆ ಜನರು ಉಗುಳುತ್ತಿರುವುದು ಸಾಮಾನ್ಯವಾಗಿದೆ. ಈ ಸಂಬಂಧ ರಸ್ತೆಗಳಲ್ಲಿ ಉಗುಳುವವರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿರುವ ನಗರ ಪಾಲಿಕೆ ನಗರದೆಲ್ಲೆಡೆ ಸಿಸಿಟಿವಿ ಕಣ್ಗಾವಲು ಇರಿಸಿದೆ. ಒಟ್ಟು ನಗರದಾದ್ಯಂತ ಸುಮಾರು 3250 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸದ್ಯ 10 ದಿನಗಳ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದು, 88 ಬೈಕ್ ಸವಾರರ ವಿರುದ್ಧ ಕ್ರಮಕೈಗೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಇಲಾಖೆ ಅಭಿಯೋಜಕ ಪ್ರದೀಪ್ ಉಮ್ರಿಗಾರ್, ಸೂರತ್ ನಗರದಲ್ಲಿ ಒಟ್ಟು 3250 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರ ವಿರುದ್ಧ ಕ್ರಮಕೈಗೊಳ್ಳಲು ನಗರ ಪಾಲಿಕೆ ಮುಂದಾಗಿದೆ. ಯೋಜನೆಯ ಪ್ರಾಯೋಗಿಕ ಹಂತದ 10 ದಿನಗಳಲ್ಲಿ ಸಾರ್ವಜನಿಕರ ಸ್ಥಳಗಳಲ್ಲಿ ಉಗುಳಿದ 88 ಮಂದಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆಯು ಉಗುಳುವವರ ವಿರುದ್ಧ 100 ರೂಪಾಯಿ ದಂಡ ವಿಧಿಸಲು ಮುಂದಾಗಿದೆ. ಈ ದಂಡವನ್ನು ಏಳು ದಿನಗಳಲ್ಲಿ ಪಾವತಿಸದಿದ್ದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಮೊದಲ ಬಾರಿ ಸಿಕ್ಕಿಬಿದ್ದರೆ 100 ರೂ. ದಂಡ, ಎರಡನೇ ಬಾರಿ ಸಿಕ್ಕ ಬಿದ್ದರೆ 250 ರೂ. ದಂಡ ವಿಧಿಸಲಾಗುತ್ತದೆ. ಎರಡಕ್ಕಿಂತ ಹೆಚ್ಚು ಬಾರಿ ಸಿಕ್ಕಿ ಬಿದ್ದರೆ 5000ಕ್ಕೂ ಅಧಿಕ ದಂಡ ವಿಧಿಸುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ದಂಡ ವಿಧಿಸಿದ 7 ದಿನಗಳ ಒಳಗಾಗಿ ಮಹಾನಗರ ಪಾಲಿಕೆಯ ನಾಗರಿಕ ಕೇಂದ್ರ ಮತ್ತು ಪಾಲಿಕೆ ವೆಬ್ಸೈಟ್ನಲ್ಲಿ ಪಾವತಿ ಮಾಡಬೇಕು ಎಂದು ತಿಳಿಸಿದ್ದಾರೆ.
88 ಮಂದಿ ವಿರುದ್ಧ ಕ್ರಮ: ಈ ಯೋಜನೆಯ 10 ದಿನಗಳ ಪ್ರಾಯೋಗಿಕ ಪರೀಕ್ಷೆಯಲ್ಲಿ ರಸ್ತೆಯಲ್ಲಿ ಉಗುಳಿದ ಒಟ್ಟು 88 ಮಂದಿಗೆ ನೊಟೀಸ್ ನೀಡಲಾಗಿದೆ. 10 ದಿನದಲ್ಲಿ 88 ಮಂದಿ ಇಲ್ಲಿನ ರಸ್ತೆಗಳಲ್ಲಿ ಉಗುಳಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇವರ ವಿರುದ್ಧ ಕ್ರಮಕೈಗೊಳ್ಳಲು ಪಾಲಿಕೆ ಮುಂದಾಗಿದೆ. ನಗರವನ್ನು ಸ್ವಚ್ಛವಾಗಿರಿಸುವ ನಿಟ್ಟಿನಲ್ಲಿ ಸೂರತ್ ನಗರ ಪಾಲಿಕೆ ಈ ಹೊಸ ಅಭಿಯಾನವನ್ನು ಹಮ್ಮಿಕೊಂಡಿದ್ದು, ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ : ವಾರಣಾಸಿಯಲ್ಲಿ ದೇಶದ ಮೊದಲ ಎಡಗೈ ಚಾಲನಾ ತರಬೇತಿ ಟ್ರ್ಯಾಕ್; ವಿದೇಶಗಳಲ್ಲಿ ಉದ್ಯೋಗಾವಕಾಶ