ಪುರುಲಿಯಾ( ಪಶ್ಚಿಮ ಬಂಗಾಳ): ಉತ್ತರ ಪ್ರದೇಶದ ಮೂವರು ಸಾಧುಗಳನ್ನು ಸ್ಥಳೀಯರು ಅಪಹರಣಕಾರರು ಎಂದು ಶಂಕಿಸಿ ಹಲ್ಲೆ ಮಾಡಿದ್ದಾರೆ. ಗಂಗಾಸಾಗರ ಮೇಳಕ್ಕೆ ತೆರಳುತ್ತಿದ್ದಾಗ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಗುಂಪೊಂದು ಸಾಧುಗಳನ್ನು ಥಳಿಸಿದೆ. ಈ ಸಂಬಂಧ ಇದುವರೆಗೆ 12 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುರುಲಿಯ ಕಾಶಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗೌರಂಗಡಿಯಲ್ಲಿ ಗುರುವಾರ ಈ ಘಟನೆ ನಡೆದಿದೆ. ಮೂವರು ಸಾಧುಗಳು ಮಕರ ಸಂಕ್ರಾಂತಿಗಾಗಿ ಗಂಗಾಸಾಗರಕ್ಕೆ ತೆರಳಲು ವಾಹನವೊಂದನ್ನು ಬಾಡಿಗೆಗೆ ಪಡೆದಿದ್ದರು. ಸಾಧುಗಳು, ಗಂಗಾಸಾಗರಕ್ಕೆ ತೆರಳಲು ಇರುವ ಮಾರ್ಗದ ಬಗ್ಗೆ ವಿಚಾರಿಸುತ್ತಿದ್ದಾಗ, ಕೆಲವು ಸ್ಥಳೀಯರು ಮೂವರ ಮೇಲೆ ಅನುಮಾನಗೊಂಡು, ಅಪಹರಣಕಾರರೆಂದು ಶಂಕಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸೈಕಲ್‌ನಲ್ಲಿ ರಸ್ತೆ ದಾಟುತ್ತಿದ್ದ ಮೂವರು ಹುಡುಗಿಯರನ್ನು ಅಪಹರಿಸಲು ಸಾಧುಗಳು ಪ್ರಯತ್ನಿಸುತ್ತಿದ್ದರು ಎಂದು ಸಾಧುಗಳ ಮೇಲೆ ಹಲ್ಲೆ ಮಾಡಿರುವ ಗುಂಪು ಪ್ರತಿಯಾಗಿ ಆರೋಪ ಮಾಡಿದೆ. ಆದಾಗ್ಯೂ, ಸಾಧುಗಳು ಹುಡುಗಿಯರಿಗೆ ಹಾನಿ ಮಾಡಲು ಪ್ರಯತ್ನಿಸಲಿಲ್ಲ ಎಂದು ಹೇಳಿದ್ದಾರೆ. ಆದರೂ ಸ್ಥಳೀಯರು ಸಾಧುಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಕಾಶಿಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಾಧುಗಳನ್ನು ಠಾಣೆಗೆ ಕರೆದೊಯ್ದರು. ನಂತರ ಸುಮಾರು 50 ರಿಂದ 60 ಗ್ರಾಮಸ್ಥರು ಸಾಧುಗಳ ರಕ್ಷಣೆಗೆ ಧಾವಿಸುವಂತೆ ಪುರುಲಿಯಾ ಸಂಸದ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜ್ಯೋತಿರ್ಮಯ್ ಸಿಂಗ್ ಮಹತೋ ಅವರನ್ನು ಸಂಪರ್ಕಿಸಿದರು ಎನ್ನಲಾಗಿದೆ. ಸಂಸದರು ಶುಕ್ರವಾರ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ವಿಚಾರಿಸಿದರು ಎಂದು ತಿಳಿದು ಬಂದಿದೆ.
ಅಂತಿಮವಾಗಿ, ಸಾಧುಗಳನ್ನು ಬಿಡುಗಡೆ ಮಾಡಲಾಗಿದೆ. ಶನಿವಾರ ಪುರುಲಿಯದ ಚೌಕ್‌ಬಜಾರ್‌ನಲ್ಲಿರುವ ಬಾರಾ ಕಾಳಿ ಮಂದಿರಕ್ಕೆ ಸಾಧುಗಳನ್ನು ಕರೆದೊಯ್ಯಲಾಯಿತು. ಮೂವರನ್ನು ಗಂಗಾಸಾಗರಕ್ಕೆ ಕಳುಹಿಸಲಾಗುವುದು ಎಂದು ಜಿಲ್ಲಾ ಬಿಜೆಪಿ ಮೂಲಗಳು ತಿಳಿಸಿವೆ. ಸಾಧುಗಳ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹರಿಹಾಯ್ದಿದೆ. ಅಲ್ಲದೇ ಘಟನೆ ನಿರ್ವಹಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಷ್ಟೇ ಅಲ್ಲ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸಿದೆ.
ಘಟನೆ ಬಗ್ಗೆ ಪೊಲೀಸರು ಹೇಳಿದ್ದಿಷ್ಟು: ಭಾಷಾ ಸಮಸ್ಯೆಯಿಂದ ಸಾಧುಗಳು ಮತ್ತು ಸ್ಥಳೀಯರ ನಡುವೆ ವೈಮನಸ್ಸು ಉಂಟಾಗಿತ್ತು ಎಂದು ಪುರುಲಿಯಾ ಪೊಲೀಸರು ತಿಳಿಸಿದ್ದಾರೆ. ಹುಡುಗಿಯರು ಭಯದಿಂದ ಓಡಿಹೋದ ಕಾರಣ, ಸ್ಥಳೀಯರು ಅವರನ್ನು ಅಪಹರಣಕಾರರು ಎಂದು ತಪ್ಪಾಗಿ ಭಾವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.