ನವದೆಹಲಿ/ಗ್ರೇಟರ್ ನೋಯ್ಡಾ: ಗ್ರೇಟರ್ ನೋಯ್ಡಾದ ಥಾನಾ ಬೀಟಾ 2 ಎಂಬ ಪ್ರದೇಶದಲ್ಲಿ ವಾಸಿಸುತ್ತಿದ್ದ 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಮೇಲೆ ಮೂವರು ಕಿರಾತಕರು ಅತ್ಯಾಚಾರ ಎಸಗಿದ್ದಾರೆ. ಪ್ರಮುಖ ಆರೋಪಿಯು ಸಂತ್ರಸ್ತೆಯ ಮೇಲೆ ಸತತ 5 ತಿಂಗಳ ಕಾಲ ಅತ್ಯಾಚಾರವೆಸಗಿದ್ದ ಎನ್ನುವುದು ತನಿಖೆಯ ಮೂಲಕ ತಿಳಿದುಬಂದಿದೆ. ಆರೋಪಿಗಳ ಲೈಂಗಿಕ ದೌರ್ಜನ್ಯದಿಂದ ನೊಂದ ಸಂತ್ರಸ್ತೆ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕುಟುಂಬಸ್ಥರು ಆಕೆಯ ಪ್ರಾಣ ರಕ್ಷಿಸಿದ್ದಾರೆ. ಈ ವೇಳೆ, ತನ್ನ ಮೇಲೆ ನಡೆದ ದುಷ್ಕೃತ್ಯವನ್ನು ವಿದ್ಯಾರ್ಥಿನಿ ಕುಟುಂಬಸ್ಥರಿಗೆ ವಿವರಿಸಿದಾಗ ಸಂಗತಿ ಗೊತ್ತಾಗಿದೆ.
ಗ್ರೇಟರ್ ನೋಯ್ಡಾದ ಇಂಟರ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯನ್ನು ಪ್ರೀತಿಸುವ ನೆಪದಲ್ಲಿ ಯುವಕನೊಬ್ಬ ದೈಹಿಕ ಸಂಬಂಧ ಬೆಳೆಸಿದ್ದಾನೆ. ನಂತರ ಆರೋಪಿ ಕೃತ್ಯದ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡೋಕೆ ಶುರು ಮಾಡಿದ್ದಾನೆ. ಅಷ್ಟೇ ಅಲ್ಲ, ಆಕೆಯ ಸಹೋದರ ಮತ್ತು ಸಹೋದರಿಯನ್ನು ಹತ್ಯೆ ಮಾಡುವ ಬೆದರಿಕೆ ಹಾಕಿದ್ದು, ಸತತ 5 ತಿಂಗಳ ಕಾಲ ಅತ್ಯಾಚಾರವೆಸಗಿದ್ದಾನೆ. ಪ್ರಕರಣದ ಪ್ರಮುಖ ಆರೋಪಿ ತನ್ನ ಸ್ನೇಹಿತರಿಬ್ಬರಿಗೆ ಅಶ್ಲೀಲ ವಿಡಿಯೋ ಶೇರ್ ಮಾಡಿದ್ದಾನೆ. ಬಳಿಕ ಇಬ್ಬರೂ ಸಹ ವಿದ್ಯಾರ್ಥಿನಿಯನ್ನು ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಮೂವರು ಆರೋಪಿಗಳು ಸಂತ್ರಸ್ತೆಯನ್ನು ಇತರ ಸ್ನೇಹಿತರ ಜೊತೆಗೂ ದೈಹಿಕ ಸಂಬಂಧ ಹೊಂದುವಂತೆ ಒತ್ತಡ ಹೇರುತ್ತಿದ್ದರು. ಇದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮನೆಯಲ್ಲಿದ್ದ ಕಿರಿಯ ಸಹೋದರಿ ಇದನ್ನು ನೋಡಿ ಕೂಗಿಕೊಂಡಿದ್ದಾಳೆ. ಕೂಡಲೇ ಮಗಳ ಕೊಠಡಿಗೆ ದೌಡಾಯಿಸಿದ ಕುಟುಂಬಸ್ಥರು ಆಕೆಯನ್ನು ಬಚಾವ್ ಮಾಡಿದ್ದಾರೆ. ಘಟನೆಗೆ ಕಾರಣವೇನು ಎಂದು ಸಂಬಂಧಿಕರು ವಿದ್ಯಾರ್ಥಿನಿಯನ್ನು ಕೇಳಿದಾಗ ಆಕೆ ತಾನು ಅನುಭವಿಸಿದ ನೋವಿನ ಕಥೆ ಹೇಳಿದ್ದಾಳೆ.
ನನಗೆ ಅನೇಕರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಮನನೊಂದಿದ್ದೇನೆ. ಹೀಗಾಗಿ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ. ಇದರ ನಂತರ, ಸಂತ್ರಸ್ತೆಯ ತಾಯಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಪೊಲೀಸರು ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧ ಮುಂದುವರಿಸಿದ್ದಾರೆ.
ಗ್ರೇಟರ್ ನೋಯ್ಡಾ ವಲಯದ ಎಡಿಸಿಪಿ ದಿನೇಶ್ ಕುಮಾರ್ ಸಿಂಗ್ ಮಾತನಾಡಿ, "ಈ ಘಟನೆ ಕುರಿತು ಆರೋಪಿಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಯ ತಾಯಿಯ ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಹಾಗೂ ಆತನ ಸ್ನೇಹಿತರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು. ಈಗಾಗಲೇ ಆರೋಪಿಗಳ ಬಂಧನಕ್ಕೆ ಹಲವು ತಂಡಗಳನ್ನು ರಚಿಸಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ಕೆಳಮನೆ ಮಹಿಳೆ, ಮೇಲ್ಮನೆ ವ್ಯಕ್ತಿ ನಾಪತ್ತೆ: ಅವರ ಗಂಡ, ಇವರ ಪತ್ನಿಯಿಂದ ಪ್ರತ್ಯೇಕ ದೂರು