ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಮುಂದುವರೆದಿದ್ದು, ಮಾನವ ಮತ್ತು ವನ್ಯಜೀವಿ ನಡುವಿನ ಸಂಘರ್ಷ ಕುರಿತು ಸದನದಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಲಿಖಿತ ಉತ್ತರ ನೀಡಿದ್ದಾರೆ. ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 2022-23 ರಲ್ಲಿ ಆನೆ ದಾಳಿಯಿಂದ ಒಟ್ಟು 605 ಜನರು ಮತ್ತು 2022-23ರಲ್ಲಿ 103 ಜನರು ಹುಲಿ ದಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಸಚಿವರು ರಾಜ್ಯಸಭೆಯಲ್ಲಿ ತಿಳಿಸಿದರು.
ಕಳೆದ ಐದು ವರ್ಷದಲ್ಲಿ (2018-2022) ಹುಲಿ ದಾಳಿಗೆ 293 ಮಂದಿ ಬಲಿಯಾಗಿದ್ದು, 2018-19 ಮತ್ತು 2022-23ರ ಅವಧಿಯಲ್ಲಿ 2,657 ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಮಾಹಿತಿ ಹಂಚಿಕೊಂಡಿದ್ದಾರೆ.
2018ರಲ್ಲಿ 31 ಮಂದಿ, 2019ರಲ್ಲಿ 49 ಮಂದಿ, 2020ರಲ್ಲಿ 51 ಮಂದಿ, 2021ರಲ್ಲಿ 59 ಮಂದಿ ಹಾಗೂ 2022ರಲ್ಲಿ 103 ಮಂದಿ ಹುಲಿ ದಾಳಿಗೆ ಬಲಿಯಾಗಿದ್ದಾರೆ. ಇನ್ನು ಆನೆ ದಾಳಿಯಿಂದ 2018-19ರಲ್ಲಿ 457, 2019-20ರಲ್ಲಿ 586, 2020-21ರಲ್ಲಿ 464 ಮತ್ತು 2021-22ರಲ್ಲಿ 545 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಚಿವರು ಹೇಳಿದರು.
ಸಿಂಹಗಳ ಸಾವು: ಗುಜರಾತ್‌ನಲ್ಲಿ 2019 ರಿಂದ 2021 ರವರೆಗೆ ಒಂದು ವರ್ಷದೊಳಗಿನ 182 ಮರಿಗಳು ಸೇರಿದಂತೆ 397 ಸಿಂಹಗಳು ಸಾವನ್ನಪ್ಪಿವೆ. ಕಳೆದ ಐದು ವರ್ಷಗಳಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಒಟ್ಟು ಸಿಂಹಗಳ ಸಾವಿನ ಪೈಕಿ ಶೇ.10.53ರಷ್ಟು ಸಿಂಹಗಳು, ಶೇ.3.82ರಷ್ಟು ಮರಿಗಳು ಸೇರಿದ್ದು, ಅಸ್ವಾಭಾವಿಕ ಕಾರಣಗಳಿಂದ ಸಾವನ್ನಪ್ಪಿವೆ ಎಂದು ಚೌಬೆ ಮಾಹಿತಿ ನೀಡಿದರು.
ವಾಸಸ್ಥಾನದ ಅವನತಿ, ನೈಸರ್ಗಿಕ ಬೇಟೆಯ ನೆಲೆಯ ಸವಕಳಿ, ನಿರಂತರ ಸಂರಕ್ಷಣಾ ಪ್ರಯತ್ನಗಳಿಂದಾಗಿ ಕಾಡು ಪ್ರಾಣಿಗಳ ಸಂಖ್ಯೆಯ ಹೆಚ್ಚಳ ಸೇರಿ ಹಲವಾರು ಕಾರಣಗಳಿಂದಾಗಿ ದೇಶದ ವಿವಿಧ ಭಾಗಗಳಿಂದ ಕಾಡು ಪ್ರಾಣಿಗಳ ದಾಳಿಗಳು ನಡೆಯುತ್ತಿರುವುದರ ಬಗ್ಗೆ ವರದಿಯಾಗಿವೆ ಎಂದು ಅಶ್ವಿನಿ ಕುಮಾರ್ ಚೌಬೆ ಹೇಳಿದರು.
ವನ್ಯಜೀವಿ ಆವಾಸಸ್ಥಾನಗಳ ಅಭಿವೃದ್ಧಿ, ಪ್ರಾಜೆಕ್ಟ್ ಟೈಗರ್ ಮತ್ತು ಪ್ರಾಜೆಕ್ಟ್ ಎಲಿಫೆಂಟ್, ವನ್ಯಜೀವಿಗಳ ನಿರ್ವಹಣೆ ಮತ್ತು ದೇಶದಲ್ಲಿ ಅದರ ಆವಾಸಸ್ಥಾನಕ್ಕಾಗಿ ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳಿಗೆ ಕೇಂದ್ರವು ಹಣಕಾಸಿನ ನೆರವು ನೀಡುತ್ತದೆ ಎಂದು ಚೌಬೆ ಹೇಳಿದರು. ಈ ಯೋಜನೆಗಳ ಅಡಿ ಮುಳ್ಳುತಂತಿ ಬೇಲಿಗಳು, ಸೌರ-ಚಾಲಿತ ವಿದ್ಯುತ್ ಬೇಲಿಗಳು, ಜೈವಿಕ ಫೆನ್ಸಿಂಗ್, ಇತ್ಯಾದಿಗಳಂತಹ ಭೌತಿಕ ತಡೆ ಗೋಡೆಗಳ ನಿರ್ಮಾಣ ಮಾಡಬೇಕು ಎಂದು ಸಚಿವರು ಹೇಳಿದ್ದಾರೆ.
ಓದಿ: "ಕ್ಯಾ. ಅರ್ಜುನನ ಸ್ಮಾರಕ ನಿರ್ಮಾಣ"; ಸಾವಿನ ಬಗ್ಗೆ ತನಿಖೆಗೆ ಸೂಚನೆ : ಸಿಎಂ ಸಿದ್ದರಾಮಯ್ಯ