ಮಹಾರಾಷ್ಟ್ರ : ಈಗಾಗಲೇ ಕೊರೊನಾ 2ನೇ ಅಲೆಯ ಭೀಕರತೆಗೆ ತತ್ತರಿಸಿರುವ ದೇಶ ಇದೀಗ ಮತ್ತೊಂದು ಭಯಾನಕ ರೂಪಾಂತರಿ ಡೆಲ್ಟಾ ವೈರಸ್ಗೆ ಬೆಚ್ಚಿ ಬಿದ್ದಿದೆ. ಈ ನಡುವೆ ರೂಪಾಂತರಿ ವೈರಾಣುವಿನ 21 ಪ್ರಕರಣ ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ರಾಜ್ಯದ ಆರೋಗ್ಯ ಸಚಿವ ರಾಜೇಶ್ ಟೋಪೆ ಮಾಹಿತಿ ನೀಡಿದ್ದು, ರತ್ನಗಿರಿಯಲ್ಲಿ 9 ಪ್ರಕರಣ ಪತ್ತೆಯಾಗಿವೆ. ಜಲ್ಗಾಂವ್ನಲ್ಲಿ 7, ಮುಂಬೈನಲ್ಲಿ 2, ಪಾಲ್ಘರ್ ಹಾಗೂ ಥಾಣೆ, ಸಿಂಧೂದುರ್ಗ್ ಜಿಲ್ಲೆಗಳಲ್ಲಿ ತಲಾ 1 ಪ್ರಕರಣ ವರದಿಯಾಗಿವೆ ಎಂದು ತಿಳಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಸುಮಾರು 7,500ಕ್ಕೂ ಹೆಚ್ಚು ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಪ್ರಕ್ರಿಯೆಯಿಂದ ಡೆಲ್ಟಾ ಪ್ಲಸ್ ರೂಪಾಂತರಿ ವೈರಾಣು ಸೋಂಕಿಗೆ ಗುರಿಯಾದವರ ಸಂಪೂರ್ಣ ಮಾಹಿತಿಗಳನ್ನು ಪಡೆಯಲಾಗುತ್ತಿದೆ. ಅವರ ಪ್ರಯಾಣದ ವಿವರ ಸೇರಿದಂತೆ ಲಸಿಕೆ ಪಡೆದಿದ್ದಾರೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ.