ಜೈಪುರ (ರಾಜಸ್ಥಾನ): ದೇಶದಲ್ಲಿ ಕೊರೊನಾ ವೈರಸ್ ಅಲೆಯ ನಡುವೆ ಆಮ್ಲಜನಕದ ಕೊರತೆಯಂತಹ ಸಮಸ್ಯೆಯಿಂದಾಗಿ ಹಲವರು ಪ್ರಾಣ ಬಿಟ್ಟಿರುವುದು ವರದಿಯಾಗುತ್ತಿದೆ.
ಅಲ್ಲದೇ ಜನರಿಗೂ ಆಮ್ಲಜನಕದ ಬಗೆಗಿನ ಅರಿವು ಸಹ ಹೆಚ್ಚುತ್ತಿದೆ. ಉಸಿರಾಟಕ್ಕಾಗಿ ಹಣ ನೀಡಿ ಆಮ್ಲಜನಕ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ, ರಾಜಸ್ಥಾನದ ಭರತ್‌ಪುರದ ಕೇಂದ್ರ ನರ್ಸರಿಯಲ್ಲಿ 20 ಸಾವಿರಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಲಾಗಿದೆ.
ವಿಶೇಷ ಎಂದರೆ ಈ ಬಾರಿ ಹೆಚ್ಚು ಆಮ್ಲಜನಕ ಮತ್ತು ನೆರಳು ನೀಡುವ ಸಸ್ಯಗಳನ್ನು ಬೆಳೆಸುವತ್ತ ಈ ನರ್ಸರಿ ಗಮನ ಹರಿಸಿದೆ. ಕೇಂದ್ರ ನರ್ಸರಿಯಲ್ಲಿ 35 ಜಾತಿಗಳ 65 ಸಾವಿರ ಸಸಿಗಳನ್ನು ನೆಡಲಾಗಿತ್ತು. ಜುಲೈ 1ರಿಂದ ಈ ಸಸ್ಯಗಳನ್ನು ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಕಡಿಮೆ ವೆಚ್ಚದಲ್ಲಿ ಲಭ್ಯವಾಗಲಿದೆ.
ಸುಮಾರು 25 ಸಾವಿರ ಸಸ್ಯಗಳನ್ನು ಇಲ್ಲಿ ಬೆಳೆಸಲಾಗಿದೆ. ಹೆಚ್ಚು ಆಮ್ಲಜನಕ ಮತ್ತು ನೆರಳು ನೀಡುವ ಮರಗಳನ್ನು ಭವಿಷ್ಯಕ್ಕೆ ನೀಡುವ ಉದ್ದೇಶದಿಂದ ಈ ನರ್ಸರಿ ವಿಭಿನ್ನ ಕಾರ್ಯಕ್ಕೆ ಮುಂದಾಗಿದೆ. ಅದರಲ್ಲೂ ಹೆಚ್ಚಾಗಿ ಆಲದ ಮರ, ಅರಳಿಮರ ಹೀಗೆ ಬೃಹತ್ ಗಾತ್ರದ ಮರಗಳ ಪೋಷಣೆಗೆ ಮುಂದಾಗಿದೆ.
ಇದಿಷ್ಟೇ ಅಲ್ಲ, ಈ ನರ್ಸರಿಯಲ್ಲಿ ವಿವಿಧ ಜಾತಿಯ ಹೂವು, ಹಣ್ಣು ಬಿಡುವ ಸಸಿಗಳನ್ನೂ ಸಹ ಬೆಳೆಸಲಾಗುತ್ತಿದೆ. ಪೇರಲ, ದಾಸವಾಳ, ಮಲ್ಲಿಗೆ, ಸೇವಂತಿಗೆ ಸೇರಿದಂತೆ ಪೂಜೆಗಾಗಿ ಬಹುಬೇಡಿಕೆಯ ಬನ್ನಿ ಮರದ ಸಸಿಗಳು ಸಹ ಇಲ್ಲಿ ಸಿಗುತ್ತವೆ. ಈ ಸಸಿಗಳು ಕೇವಲ 4 ರೂಪಾಯಿಯಿಂದ ಆರಂಭಗೊಂಡು 70 ರೂಪಾಯಿವರೆಗೂ ಲಭ್ಯವಿದೆ.
ಜೀವ ಉಳಿಸುವ ಕಾರ್ಯದಲ್ಲಿ ಆಮ್ಲಜನಕದ ಪಾತ್ರವೂ ಇದೆ ಎಂಬ ಅರಿವು ಜನತೆಗೆ ಮೂಡಿಸುವುದು ಈ ಕಾಲಕ್ಕೆ ಹೆಚ್ಚು ಪ್ರಸ್ತುತವಾಗಿದೆ. ಎಷ್ಟು ವೇಗವಾಗಿ ಅರಣ್ಯ ನಾಶವಾಗುತ್ತಿದೆಯೋ ಅದಕ್ಕಿಂತಲೂ ದುಪ್ಪಟ್ಟು ವೇಗದಲ್ಲಿ ಮರಗಳನ್ನ ನೆಡದಿದ್ದರೆ ಭವಿಷ್ಯದಲ್ಲಿ ಬದುಕು ಇನ್ನಷ್ಟು ದುಸ್ತರವಾಗಲಿದೆ.
ಈಗ ಇದೊಂದು ನರ್ಸರಿಯಲ್ಲಿ ಪ್ರಾಣವಾಯುವಿನ ಅಗತ್ಯತೆ ಅರಿತು ಹೆಚ್ಚು ಮರಗಳನ್ನ ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದೇ ರೀತಿ ಪರಿಸರ ಉಳಿಸಲು ಜನತೆ ಕೈಜೋಡಿಸಿದರೆ ಭವಿಷ್ಯದಲ್ಲಿ ಮುಂದಿನ ಪೀಳಿಗೆ ಶುದ್ಧ ಗಾಳಿ ಉಸಿರಾಡಬಹುದು.