ಚೆನ್ನೈ: ದೇಶದಿಂದ ಪುರಾತನ ವಿಗ್ರಹಗಳನ್ನು ಕಳ್ಳಸಾಗಣೆ ಮಾಡುವ ಯತ್ನವನ್ನು ತಮಿಳುನಾಡು ಐಡಲ್ ವಿಂಗ್ ಸಿಐಡಿಯು ವಿಫಲಗೊಳಿಸಿದೆ. ಆರೋವಿಲ್ಲೆಯಲ್ಲಿರುವ ಫ್ರೆಂಚ್ ಪ್ರಜೆಯೊಬ್ಬರ ನಿವಾಸದಿಂದ 20 ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ತಮಿಳುನಾಡಿಗೆ ಸೇರಿದ ಪುರಾತನ ವಿಗ್ರಹಗಳನ್ನು ಕರಕುಶಲ ಅಂಗಡಿಯಲ್ಲಿ ಅಕ್ರಮವಾಗಿ ಇಡಲಾಗಿದೆ ಎಂಬ ಮಾಹಿತಿ ದೊರೆತಿತ್ತು. ಈ ಹಿನ್ನೆಲೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ನಿಂದ ಅನುಮತಿ ಪಡೆದು, ಸೆಪ್ಟಂಬರ್ 11 ರಂದು ಇನ್‌ಸ್ಪೆಕ್ಟರ್ ಇಂದಿರಾ ನೇತೃತ್ವದಲ್ಲಿ ಐಡಲ್ ವಿಂಗ್ ಶೋಧ ನಡೆಸಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಅನುಮತಿಯನ್ನು ಪಡೆಯುವ ಮೂಲಕ ಫ್ರಾನ್ಸ್‌ಗೆ ಕಳ್ಳಸಾಗಣೆ ಮಾಡುವಲ್ಲಿ ಫ್ರೆಂಚ್ ಪ್ರಜೆಗೆ ಸಹಾಯ ಮಾಡಿದ್ದ ವ್ಯಾಪಾರಿಯ ಹುಡುಕಾಟದ ಸಮಯದಲ್ಲಿ ಕೆಲವು ದಾಖಲೆಗಳು ಪತ್ತೆಯಾಗಿವೆ.
ವಶಪಡಿಸಿಕೊಂಡ ದಾಖಲೆಗಳಿಂದ ದೊರೆತ ವಿಳಾಸದೊಂದಿಗೆ, ಐಡಲ್ ವಿಂಗ್ ಆರೋವಿಲ್ಲೆಯಲ್ಲಿರುವ ಫ್ರೆಂಚ್ ಪ್ರಜೆಯ ನಿವಾಸವನ್ನು ಶೋಧಿಸಿದೆ. ಈ ವೇಳೆ 13 ಕಲ್ಲಿನ ವಿಗ್ರಹಗಳು ಮತ್ತು 4 ಲೋಹದ ಚಿತ್ರಗಳು ಸೇರಿದಂತೆ 20 ಕಲಾಕೃತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ಪೇಂಟಿಂಗ್ ಮತ್ತು ಟೆರಾಕೋಟಾವನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ತಮಿಳುನಾಡಿನ ದೇಗುಲದಿಂದ ಕಳ್ಳತನವಾಗಿದ್ದ ಪುರಾತನ ವಿಗ್ರಹಗಳು ಅಮೆರಿಕದಲ್ಲಿ ಪತ್ತೆ
ಫ್ರೆಂಚ್ ಪ್ರಜೆಯು ಈ ಕಲಾಕೃತಿಗಳನ್ನು ಫ್ರಾನ್ಸ್‌ಗೆ ಕೊಂಡೊಯ್ಯಲು ಯೋಜಿಸಿದ್ದರು. ವಿಗ್ರಹಗಳನ್ನು ವಶಪಡಿಸಿಕೊಂಡ ಸಮಯದಲ್ಲಿ ಫ್ರೆಂಚ್ ಪ್ರಜೆಯು ಫ್ರಾನ್ಸ್‌ನಲ್ಲಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ಆರೋಪಿ ಸಹಿತ ವಶಪಡಿಸಿಕೊಂಡ ಗಣೇಶ್, ವಿಷ್ಣು, ಪಾರ್ವತಿ, ಅಯ್ಯಪ್ಪನ್, ಹನುಮಾನ್ ಮತ್ತು ಮುರುಗನ್ ದೇವರ ವಿಗ್ರಹಗಳನ್ನು ಕುಂಭಕೋಣಂನ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.