ನವದೆಹಲಿ: ಜಲಾಂತರ್ಗಾಮಿ ನೌಕೆಗಳ ಸೂಕ್ಷ್ಮ ಮಾಹಿತಿ ಸೋರಿಕೆ ಆರೋಪದಲ್ಲಿ ಕಮಾಂಡರ್ ಸೇರಿ ಇಬ್ಬರು ನೌಕಾಪಡೆಯ ಹಿರಿಯ ಅಧಿಕಾರಿಗಳು ಒಳಗೊಂಡಂತೆ 6 ಜನರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳವಾರ ತನ್ನ ಮೊದಲ ಚಾರ್ಜ್‌ಶೀಟ್ ಸಲ್ಲಿಸಿದೆ.
ಬಂಧಿತ ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗದಂತೆ ನೋಡಿಕೊಳ್ಳಲು ಕೇವಲ 60 ದಿನದೊಳಗೆ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಇದು ರಕ್ಷಣಾ ವಲಯದ ಭ್ರಷ್ಟಾಚಾರ ಪ್ರಕರಣದ ತ್ವರಿತ ತನಿಖೆಯಾಗಿದೆ. ಬಂಧಿಸಿದ 60 ದಿನಗಳಲ್ಲಿ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸದಿದ್ದರೆ, ಆರೋಪಿಗಳು ಜಾಮೀನಿಗೆ ಅರ್ಹರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಇಂದು ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ನವದೆಹಲಿಯ ರೋಸ್ ಅವೆನ್ಯೂದಲ್ಲಿರುವ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 120-ಬಿ (ಅಪರಾಧದ ಪಿತೂರಿ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ದೂರುಗಳನ್ನು ದಾಖಲಿಸಿದೆ. ಹವಾಲಾ ಡೀಲರ್ ಮತ್ತು ಮತ್ತು ಖಾಸಗಿ ಕಂಪನಿಯ ನಿರ್ದೇಶಕನನ್ನು ಸಿಬಿಐ ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ಕೋರ್ಟ್ಗೆ ಮಾಹಿತಿ ನೀಡಿದ್ದು, ಸೇವೆಯಲ್ಲಿರುವ ಅಧಿಕಾರಿಗಳು ಹಣದ ಲಾಭಕ್ಕಾಗಿ ತಮ್ಮ ನಿವೃತ್ತ ಅಧಿಕಾರಿಗಳಿಗೆ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಈ ಕುರಿತ ಹೆಚ್ಚಿನ ತನಿಖೆ ಮುಂದುವರಿದಿದ್ದು, ಕೆಲವು ವಿದೇಶಿ ಪ್ರಜೆಗಳ ಪಾತ್ರವೂ ಈ ಪ್ರಕರಣದಲ್ಲಿದೆ ಎಂದು ಮೂಲಗಳು ತಿಳಿಸಿವೆ. ಸೋರಿಕೆಯಾಗಿರುವ ಮಾಹಿತಿ ತಲುಪಬೇಕಾಗಿರುವ ಸ್ಥಳ ತಲುಪಿದೆಯೇ ಎಂಬ ಬಗ್ಗೆ ತಿಳಿದುಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ ನೌಕಾಪಡೆಯ ಆಂತರಿಕ ತನಿಖೆಯು ನಡೆಯುತ್ತಿದ್ದು, 'ಅನಧಿಕೃತ ಸಿಬ್ಬಂದಿ' ಆಡಳಿತಾತ್ಮಕ ಹಾಗೂ ವಾಣಿಜ್ಯ ಸ್ವರೂಪದ ಮಾಹಿತಿಯನ್ನು ಬಹಿರಂಗ ಮಾಡಿದ್ದನ್ನು ಏಜೆನ್ಸಿಯ ಸಂಪೂರ್ಣ ಬೆಂಬಲದೊಂದಿಗೆ ತನಿಖೆ ನಡೆಸಲಾಗುತ್ತಿದೆ. ಇದರ ಜೊತೆಗೆ ಆಂತರಿಕ ತನಿಖೆಯೂ ಪ್ರಗತಿಯಲ್ಲಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Kerala Gold Smuggling Case: ಚಿನ್ನ ಕಳ್ಳಸಾಗಣೆ ಪ್ರಕರಣದ ರೂವಾರಿ ಸ್ವಪ್ನಾ ಸುರೇಶ್ಗೆ ಜಾಮೀನು