ಪುಣೆ(ಮಹಾರಾಷ್ಟ್ರ): ಹಣ್ಣು ರವಾನೆ ಮಾಡುತ್ತಿದ್ದ ಟ್ರಕ್ವೊಂದರಲ್ಲಿ ಬರೋಬ್ಬರಿ 1,878 ಕಿಲೋ ಗ್ರಾಂಗಳಷ್ಟು ಅಕ್ರಮ ಗಾಂಜಾ ವಶಕ್ಕೆ ಪಡೆದುಕೊಳ್ಳುವಲ್ಲಿ ಇಲ್ಲಿನ ಕಂದಾಯ ಗುಪ್ತಚರ ಇಲಾಖೆ ಯಶಸ್ವಿಯಾಗಿದೆ. ಇದರಲ್ಲಿ ಭಾಗಿಯಾಗಿದ್ದ ಆರು ಮಂದಿ ಆರೋಪಿಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹತ್ವದ ಮಾಹಿತಿ ಆಧಾರದ ಮೇಲೆ ಸೋಲ್ಲಾಪುರ-ಪುಣೆ ಹೆದ್ದಾರಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಹಣ್ಣು ಸಾಗಣೆ ಮಾಡುತ್ತಿದ್ದ ಟ್ರಕ್ವೊಂದರಲ್ಲಿ ಅನಾನಸ್ ಹಾಗೂ ಹಲಸಿನ ಹಣ್ಣಿನ ಮಧ್ಯೆ ಇಟ್ಟಿದ್ದ 40 ಚೀಲ ಗಾಂಜಾ ಪ್ಯಾಕ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಆಂಧ್ರಪ್ರದೇಶದಿಂದ ಪುಣೆಗೆ ಈ ಟ್ರಕ್ ತೆರಳುತ್ತಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಗಾಂಜಾ ಒಟ್ಟು ಮೌಲ್ಯ 3.75 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ.
ಬಂಧಿತ ಆರೋಪಿಗಳನ್ನ ವಿಲಾಸ್ ಪವಾರ್, ಅಭಿಷೇಕ್ ಘಾವ್ಟೆ, ವಿನೋದ್ ರಾಥೋಡ್, ರಾಜು ಗೊಂಡ್ವೆ, ಶ್ರೀನಿವಾಸ್ ಪವಾರ್ ಮತ್ತು ಧರ್ಮರಾಜ್ ಶಿಂಧೆ ಎಂದು ಗುರುತಿಸಲಾಗಿದೆ. ಇವರನ್ನ ವಿಚಾರಣೆಗೊಳಪಡಿಸಿದಾಗ ಆಂಧ್ರದಿಂದ ಗಾಂಜಾ ತೆಗೆದುಕೊಂಡು ಬಂದಿರುವುದಾಗಿ ಹೇಳಿದ್ದಾರೆ.