ರಾಂಚಿ (ಜಾರ್ಖಂಡ್): ಮುಸ್ಲಿಂ ವೈಯಕ್ತಿಕ ಕಾನೂನಿನ (Muslim Personal Law) ಪ್ರಕಾರ, 15 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಮುಸ್ಲಿಂ ಹುಡುಗಿ ತನ್ನ ಪೋಷಕರ ಹಸ್ತಕ್ಷೇಪ ಇಲ್ಲದೇ ಆಕೆಗೆ ಇಷ್ಟವಾದ ಹುಡುಗನನ್ನು ಮದುವೆಯಾಗಲು ಸ್ವತಂತ್ರಳು ಎಂದು ಜಾರ್ಖಂಡ್ ಹೈಕೋರ್ಟ್ ಹೇಳಿದೆ.
ಈ ಕಾನೂನನ್ನು ಉಲ್ಲೇಖಿಸಿ, 15 ವರ್ಷದ ಬಾಲಕಿಯನ್ನು ಮದುವೆಯಾದ ಯುವಕನ ವಿರುದ್ಧ ಎಫ್‌ಐಆರ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಜಮ್‌ಶೆಡ್‌ಪುರದ ಜುಗ್ಸಲೈ ನಿವಾಸಿ 15 ವರ್ಷದ ಬಾಲಕಿಗೆ ಆಮಿಷ ಒಡ್ಡಿ ಯುವಕ ಮದುವೆಯಾಗಿದ್ದಾನೆ ಎಂದು ಆರೋಪಿಸಿ, ಆಕೆಯ ತಂದೆ ಬಿಹಾರದ ನವಾಡ ನಿವಾಸಿ 24 ವರ್ಷದ ಯುವಕ ಮೊ. ಸೋನು ವಿರುದ್ಧ ಸೆಕ್ಷನ್ 366ಎ ಮತ್ತು 120ಬಿ ಅಡಿ ಎಫ್‌ಐಆರ್ ದಾಖಲಿಸಿದ್ದರು. ಈ ಎಫ್‌ಐಆರ್‌ನಲ್ಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಶ್ನಿಸಿ, ಮೊ. ಸೋನು ಜಾರ್ಖಂಡ್ ಹೈಕೋರ್ಟ್‌ನಲ್ಲಿ ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಸಚಿವಾಲಯದ 228 ನೌಕರರ ವಜಾ ಆದೇಶ ಎತ್ತಿಹಿಡಿದ ಉತ್ತರಾಖಂಡ್ ಹೈಕೋರ್ಟ್
ಅರ್ಜಿಯ ವಿಚಾರಣೆ ವೇಳೆ ಬಾಲಕಿಯ ತಂದೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿ ಮಗಳ ಮದುವೆಗೆ ತಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದ್ದಾರೆ. ಅಲ್ಲಾಹನ ಕೃಪೆಯಿಂದ ಮಗಳಿಗೆ ಒಳ್ಳೆಯ ಸಂಗಾತಿ ಸಿಕ್ಕಿದ್ದಾನೆ. ತಪ್ಪು ತಿಳಿವಳಿಕೆಯಿಂದಾಗಿ, ನಾನು ಸೋನು ವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಂದು ಬಾಲಕಿ ತಂದೆ ಹೇಳಿದ್ದಾರೆ. ಅಲ್ಲದೇ ವಿಚಾರಣೆ ವೇಳೆ ಯುವತಿಯ ವಕೀಲರು ಕೂಡ ಈ ಮದುವೆಗೆ ಎರಡೂ ಕುಟುಂಬದವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಎಲ್ಲಾ ಕಕ್ಷಿದಾರರ ವಾದವನ್ನು ಆಲಿಸಿದ ನ್ಯಾಯಮೂರ್ತಿ ಎಸ್ ಕೆ ದ್ವಿವೇದಿ ಅವರಿದ್ದ ಏಕ ಪೀಠವು ಯುವಕರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ಆದೇಶಿಸಿದ್ದಾರೆ.
ಮುಸ್ಲಿಂ ಹುಡುಗಿಯ ವಿವಾಹವು ಮುಸ್ಲಿಂ ವೈಯಕ್ತಿಕ ಕಾನೂನಿನಿಂದ ನಿಯಂತ್ರಿಸಲ್ಪಡುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಹುಡುಗಿಗೆ ಸುಮಾರು 15 ವರ್ಷ ಆಗಿದ್ದರೇ, ಆಕೆ ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಲು ಸ್ವತಂತ್ರಳು ಎಂದು ಕೋರ್ಟ್ ಹೇಳಿದೆ.
ಇದನ್ನು ಓದಿ: 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಬ್ಲೇಡ್‌ನಿಂದ ಕತ್ತು ಸೀಳಿ ಕೊಲೆ.. 15 ವರ್ಷದ ಬಾಲಕನ ಸೆರೆ