ಅಯೋಧ್ಯೆ(ಉತ್ತರ ಪ್ರದೇಶ): ಸರಯೂ ನದಿಯ ಗುಪ್ತರ್ ಘಾಟ್ನಲ್ಲಿ ಧಾರ್ಮಿಕ ಸ್ನಾನ ಮಾಡಬೇಕದಾದರೆ ನೀರಿನ ಸೆಳೆತಕ್ಕೆ ಸಿಲುಕಿ ಒಂದೇ ಕುಟುಂಬದ 15 ಮಂದಿ ನಾಪತ್ತೆಯಾಗಿದ್ದರು. ಈ ಪೈಕಿ ಸ್ಥಳೀಯರು ಆರು ಜನರನ್ನು ರಕ್ಷಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಲಖನೌನ ಎನ್ಡಿಆರ್ಎಫ್ ತಂಡ ಆರು ಶವಗಳನ್ನು ಹೊರತೆಗೆದಿದ್ದು, ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರಿಸಿದೆ.
ಆಗ್ರಾದಿಂದ ಒಂದೇ ಕುಟುಂಬದ ಹದಿನೈದು ಜನರು ಅಯೋಧ್ಯೆಯ ರಾಮನಿಗೆ ಪ್ರಾರ್ಥನೆ ಸಲ್ಲಿಸಲು ಹಾಗೂ ಸರಯೂ ನದಿಯಲ್ಲಿ ಸ್ನಾನ ಮಾಡಲು ಬಂದಿದ್ದರು. ಕೆಲವು ಯಾತ್ರಿಕರು ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಜಾರಿ ಬಿದ್ದು, ಕೊಚ್ಚಿ ಹೋಗಿದ್ದಾರೆ. ರಕ್ಷಿಸಲು ಹೋದ ಹಲವು ಸದಸ್ಯರು ನದಿಯ ಸುಳಿವಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಕಿರುಚಾಟ ಕೇಳಿದ ಸ್ಥಳೀಯರು ಕೂಡಲೇ ನದಿಗೆ ಹಾರಿ ಆರು ಜನರನ್ನು ರಕ್ಷಿಸಿದ್ದಾರೆ. ಉಳಿದವರಿಗಾಗಿ ಅಯೋಧ್ಯೆ ಜಿಲ್ಲಾಡಳಿತ ಶೋಧ ಕಾರ್ಯ ನಡೆಸಿತ್ತು. ಈ ಪೈಕಿ ಆರು ಮಂದಿಯ ಮೃತದೇಹ ಹೊರತೆಗೆದಿದೆ.
ಮೃತರನ್ನು ಲಲಿತ್ (40), ಪಂಕಜ್ (25), ಶ್ರುತಿ (20), ರಾಜ್‌ಕುಮಾರಿ (60), ಸೀತಾ (35) ಮತ್ತು ದೃಷ್ಟಿ (4) ಎಂದು ಗುರುತಿಸಲಾಗಿದೆ. ಪ್ರಿಯಾನ್ಶಿ (16), ಜೂಲಿ (35) ಮತ್ತು ಸಾರ್ಥಕ್ (10) ಕಾಣೆಯಾಗಿದ್ದಾರೆ.
ಸ್ಥಳದಲ್ಲಿ ಲೈಫ್ ಗಾರ್ಡ್ಗಳನ್ನು ನಿಯೋಜಿಸಿದ್ದರೆ ಈ ರೀತಿಯ ಅವಘಡಗಳು ಸಂಭವಿಸುತ್ತಿರಲಿಲ್ಲ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.