ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 14,623 ಹೊಸ ಕೋವಿಡ್-19 (COVID-19) ಪ್ರಕರಣಗಳು ದೃಢಪಟ್ಟಿದ್ದು 197 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕಳೆದ 229 ದಿನಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಸದ್ಯಕ್ಕೆ ಭಾರತದಲ್ಲಿ 1,78,098 ಸಕ್ರಿಯ ಪ್ರಕರಣಗಳಿದ್ದು, ನಿನ್ನೆ 19,446 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ ದೇಶದಲ್ಲಿ ಚೇತರಿಕೆ ಪ್ರಮಾಣ ಶೇ 98.15 ಇದೆ.
ಕಳೆದ ಕೆಲವು ದಿನಗಳಿಂದ ಭಾರತ 20,000 ಕ್ಕಿಂತ ಕಡಿಮೆ ಹೊಸ ಕೋವಿಡ್ ಪ್ರಕರಣಗಳನ್ನು ವರದಿಯಾಗುತ್ತಿದ್ದು, ಲಸಿಕೆ ನೀಡುವ ಕಾರ್ಯ ಸಹ ಭರದಿಂದ ಸಾಗುತ್ತಿದೆ. ಈ ವರೆಗೆ ಒಟ್ಟು 99,12,82,283 ಜನ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.
ಕೇರಳದಲ್ಲಿ 7,643 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 77 ಮಂದಿ ಸಾವನ್ನಪ್ಪಿದ್ದಾರೆ.