ಮೊರೆನಾ(ಮಧ್ಯಪ್ರದೇಶ): ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಸದಸ್ಯ ಜ್ಯೋತಿರಾದಿತ್ಯ ಸಿಂಧಿಯಾಗೆ ಕಾರಿಗೆ ಸೂಕ್ತ ಭದ್ರತೆ ಒದಗಿಸದ ಆರೋಪದಲ್ಲಿ 11 ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಜ್ಯೋತಿರಾದಿತ್ಯ ಸಿಂಧಿಯಾ ಭಾನುವಾರ ರಾತ್ರಿ ದೆಹಲಿಯಿಂದ ಗ್ವಾಲಿಯರ್ಗೆ ಆಗಮಿಸುವ ವೇಳೆ ಸೂಕ್ತ ಭದ್ರತೆ ನೀಡಲು ಗ್ವಾಲಿಯರ್ ಮತ್ತು ಮೊರೆನಾ ಪೊಲೀಸರು ವಿಫಲರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮೊರೆನಾ ಜಿಲ್ಲೆಯ 9 ಮಂದಿ ಮತ್ತು ಗ್ವಾಲಿಯರ್ನ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ಗ್ವಾಲಿಯರ್ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಂಘಿ ತಿಳಿಸಿದ್ದಾರೆ.
ಬೇರೆ ಕಾರಿಗೆ ಎಸ್ಕಾರ್ಟ್ ಮಾಡಿದ್ರು..
ಮಧ್ಯಪ್ರದೇಶ ಮತ್ತು ರಾಜಸ್ಥಾನ ಗಡಿಯಲ್ಲಿ ಮೊರೆನಾ ಪೊಲೀಸರು ಜ್ಯೋತಿರಾದಿತ್ಯ ಸಿಂಧಿಯಾ ಕಾರನ್ನು ಎಸ್ಕಾರ್ಟ್ ಮಾಡಬೇಕಿತ್ತು. ಆದರೆ ಸಂಸದರ ಕಾರಿನಂತೆಯೇ ಇದ್ದ ಮತ್ತೊಂದು ಕಾರು ಬಂದ ಕಾರಣ ಏನೂ ಯೋಚಿಸದೇ ಬೇರೊಂದು ಕಾರಿಗೆ ಪೊಲೀಸರು ಎಸ್ಕಾರ್ಟ್ ಮಾಡಿದ್ದರು.
ಇದನ್ನೂ ಓದಿ: ಬಹುದೊಡ್ಡ ನಕ್ಸಲ್ ಸಂಚು ವಿಫಲಗೊಳಿಸಿದ ಒಡಿಶಾ ಪೊಲೀಸ್, ಬಿಎಸ್ಎಫ್
ಇದರ ಜೊತೆಗೆ ಗ್ವಾಲಿಯರ್ ಪೊಲೀಸರೊಂದಿಗೆ ಸಂಸದರು ಆಗಮಿಸುವ ವಿಚಾರವನ್ನು ಹಂಚಿಕೊಂಡಿರಲಿಲ್ಲ ಎನ್ನಲಾಗಿದೆ. ತಡವಾಗಿ ಗ್ವಾಲಿಯರ್ ಪೊಲೀಸರಿಗೆ ಈ ವಿಚಾರ ಗೊತ್ತಾದ ನಂತರ ಹೆಚ್ಚುವರಿ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ಕಳಿಸಿಕೊಡಲಾಗಿತ್ತು ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.