ಗುವಾಹಟಿ (ಅಸ್ಸೋಂ): ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನ ಪಡಿಸಿಕೊಂಡಿದ್ದನ್ನು ಬೆಂಬಲಿಸಿ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ 14 ಮಂದಿಯನ್ನು ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸ್ ಇಲಾಖೆ ತಿಳಿಸಿದೆ.
ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ, ಐಟಿ ಕಾಯ್ದೆ ಮತ್ತು ಸಿಆರ್‌ಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ಇವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಮರೂಪ್ ಮೆಟ್ರೋಪಾಲಿಟನ್, ಬಾರ್ಪೇಟಾ, ಧುಬ್ರಿ ಮತ್ತು ಕರಿಮಗಂಜ್ ಜಿಲ್ಲೆಗಳಿಂದ ತಲಾ ಇಬ್ಬರನ್ನು ಬಂಧಿಸಲಾಗಿದೆ. ದರಾಂಗ್, ಕ್ಯಾಚಾರ್, ಹೈಲಕಂಡಿ, ದಕ್ಷಿಣ ಸಾಲ್ಮರ, ಗೋಲ್ಪರಾ ಮತ್ತು ಹೊಜೈ ಜಿಲ್ಲೆಗಳಿಂದ ತಲಾ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಆಫ್ಘನ್ನಲ್ಲಿ ಹಾವು-ಏಣಿ ಆಟ: ಮೂರು ಜಿಲ್ಲೆಗಳನ್ನು ತಾಲಿಬಾನಿಗಳಿಂದ ವಶಕ್ಕೆ ಪಡೆದ ಆಫ್ಘನ್ ಪಡೆ
ಸಾಮಾಜಿಕ ಮಾಧ್ಯಮಗಳಲ್ಲಿ ರಾಷ್ಟ್ರೀಯ ಭದ್ರತೆಗೆ ಹಾನಿಕಾರಕವಾದ ತಾಲಿಬಾನ್ ಪರ ಹೇಳಿಕೆಗಳನ್ನು ನೀಡುತ್ತಿರುವವರ ವಿರುದ್ಧ ಅಸ್ಸೋಂ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ವಯಲೆಟ್ ಬರುವಾ ಹೇಳಿದ್ದಾರೆ. ಅಲ್ಲದೇ, ಅಂಥ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಿಸುತ್ತಿದ್ದು, ನಿಮ್ಮ ಗಮನಕ್ಕೆ ಅಂಥವರು ಬಂದಲ್ಲಿ ಪೊಲೀಸರಿಗೆ ತಿಳಿಸಿ ಎಂದು ಟ್ವೀಟ್ ಮಾಡಿದ್ದಾರೆ.