ಜನಗಾಮ್ (ತೆಲಂಗಾಣ): ನಿತ್ಯವೂ ಮದ್ಯ ಸೇವಿಸಿ ತನ್ನ ತಾಯಿಗೆ ಥಳಿಸುತ್ತಿದ್ದ ಮಲತಂದೆಯನ್ನು 13 ವರ್ಷದ ಬಾಲಕನೋರ್ವ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಜನಗಾಮ್ ಜಿಲ್ಲೆಯಲ್ಲಿ ನಡೆದಿದೆ. ಹನುಮಂಡ್ಲಾ ವಿನೋದ್ (34) ಕೊಲೆಯಾದ ವ್ಯಕ್ತಿ.
ಹೈದರಾಬಾದ್ನ ಪರಸಿಗುಟ್ಟಾ ನಿವಾಸಿಯಾಗಿದ್ದ ವಿನೋದ್ನ ಮೊದಲ ಪತ್ನಿ ತೀರಿಹೋಗಿದ್ದಳು. ಇತ್ತ, ಬಾಲಕನ ತಂದೆ ಸಹ ಮೃತಪಟ್ಟ ನಂತರ ತಾಯಿ ಮಂಜುಳಾ, ವಿನೋದ್ನೊಂದಿಗೆ ಎರಡನೇ ಮದುವೆಯಾಗಿದ್ದಳು. ನಂತರ ಜನಗಾಮ್ನ ಅಂಬೇಡ್ಕರ್ ನಗರದಲ್ಲಿ ಕುಟುಂಬ ಸಮೇತವಾಗಿ ವಾಸವಾಗಿದ್ದರು. ಆದರೆ, ಪ್ರತಿ ದಿನವೂ ವಿನೋದ್ ಕುಡಿದು ಬಂದು ಮಂಜುಳಾಗೆ ಥಳಿಸುತ್ತಿದ್ದ ಎನ್ನಲಾಗ್ತಿದೆ.
ಇದೇ ಕಾರಣಕ್ಕೆ ಮಂಜುಳಾ ಅಲ್ಲೇ ಸಮೀಪದಲ್ಲಿರುವ ತಾಯಿ ಮನೆಗೆ ಬಂದಿದ್ದಳು. ಆದರೂ, ಮಂಗಳವಾರ ರಾತ್ರಿ 10.30ರ ಸುಮಾರಿಗೆ ಅತ್ತೆಯ ಮನೆಗೆ ಬಂದ ವಿನೋದ್, ಅಲ್ಲಿ ಕೂಡ ಮಂಜುಳಾ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ಸ್ಥಳದಲ್ಲೇ ಇದ್ದ 13 ವರ್ಷದ ಮಗನಿಗೆ ತನ್ನ ತಾಯಿಯನ್ನು ಥಳಿಸುವುದನ್ನು ನೋಡಿ ಸಹಿಸಲು ಸಾಧ್ಯವಾಗಿಲ್ಲ. ಹೀಗಾಗಿ ಮಲತಂದೆ ಕಣ್ಣಿಗೆ ಖಾರದ ಪುಡಿ ಎರಚಿದ್ದಾನೆ. ಅಲ್ಲದೇ, ಕೈಗೆ ಸಿಕ್ಕ ಚಾಕುವಿನಿಂದ ಅನೇಕ ಬಾರಿ ಇರಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ವಿನೋದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಈ ವಿಷಯದ ಎಸಿಪಿ ಜಿ.ಕೃಷ್ಣ ಮತ್ತು ಹಿರಿಯ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬೆಳ್ಳಂಬೆಳ್ಳಗೆ ಸದ್ದು ಮಾಡಿದ ಖಾಕಿ ಪಿಸ್ತೂಲ್: ಬೆಂಗಳೂರಲ್ಲಿ ರೌಡಿಶೀಟರ್ ಕಾಲಿಗೆ ಬುಲೆಟ್ ನುಗ್ಗಿಸಿದ ಪೊಲೀಸ್