ಉಮರಿಯಾ (ಮಧ್ಯಪ್ರದೇಶ): 13 ವರ್ಷದ ಬಾಲಕಿಯನ್ನು ಜನವರಿ 4 ರಂದು ಮತ್ತು ಜನವರಿ 11ರಂದು ಎರಡು ಬಾರಿ ಅಪಹರಿಸಿ 9 ಮಂದಿ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದ ಉಮರಿಯಾ ಪಟ್ಟಣದಲ್ಲಿ ನಡೆದಿದೆ.
ಬಾಲಕಿಯ ತಾಯಿ ಜನವರಿ 14 ರಂದು ಈ ಕುರಿತು ದೂರು ನೀಡಿದ್ದು, ದೂರಿನ ಆಧಾರದಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದ್ದು, ಇನ್ನೂ ಇಬ್ಬರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರ ಎಸಗಿ ಬೆದರಿಕೆ ಒಡ್ಡಿದ್ದ ಕಾಮುಕರು..!
ಉಮರಿಯಾ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಜನವರಿ 4 ರಂದು ಬಾಲಕಿಯನ್ನು ದುಷ್ಕರ್ಮಿಗಳು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಅತ್ಯಾಚಾರ ಎಸಗಿದ್ದರು. ಇದಾದ ನಂತರ ಜನವರಿ 5ರಂದು ಆಕೆಯನ್ನು ಬಿಡುಗಡೆಗೊಳಿಸಿದ್ದರು.
ಯಾರಿಗೂ ಹೇಳಬಾರದು ಮತ್ತು ದೂರು ನೀಡಬಾರದು ಎಂದು ಬೆದರಿಸಿದ್ದರಿಂದ ಆಕೆ ಪೊಲೀಸ್ ಠಾಣೆಗೆ ದೂರು ನೀಡಿರಲಿಲ್ಲ. ಇದಾದ ನಂತರ ಅವರಲ್ಲಿ ಮೂವರು ದುಷ್ಕರ್ಮಿಗಳು ಹಾಗೂ ಮತ್ತಿಬ್ಬರು ಬೇರೆಯವರು ಆಕೆಯನ್ನು ಜನವರಿ 11 ರಂದು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಅತ್ಯಾಚಾರ ಎಸಗಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ, ಜೀವಂತ ಸುಟ್ಟ ದುಷ್ಕರ್ಮಿಗಳು!
ಮನೆಗೆ ಬಾಲಕಿ ಬರದ ಕಾರಣದಿಂದ ತಾಯಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ನೀಡಿದ್ದಾರೆ. ಇದಾದ ಮಾರನೇ ದಿನ ಬಾಲಕಿ ಕಾಮುಕರಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಇದಾದ ನಂತರ ತಾಯಿ ಹಾಗೂ ಮಗಳು ಇಬ್ಬರೂ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಭಾರತೀಯ ದಂಡಸಂಹಿತೆಯ ಸೆಕ್ಷನ್ 376, ಸೆಕ್ಷನ್ 366(ಎ) ಹಾಗೂ ಪೋಕ್ಸೋ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.