ನವದೆಹಲಿ: 13 ವರ್ಷದ ಬಾಲಕನ ಲಿಂಗ ಪರಿವರ್ತನೆ ಮಾಡಿ ಕಳೆದೊಂದು ವರ್ಷದಿಂದ ಆತನ ಮೇಲೆ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಮಹಿಳಾ ಆಯೋಗದಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಕಳೆದ ಮೂರು ವರ್ಷಗಳ ಹಿಂದೆ ಲಕ್ಷ್ಮೀ ನಗರದ ನಿವಾಸಿಯಾಗಿರುವ ಆರೋಪಿ, ಬಾಲಕನನ್ನು ಭೇಟಿ ಮಾಡಿದ್ದಾನೆ. ಇದಾದ ಬಳಿಕ ಆತನೊಂದಿಗೆ ಸ್ನೇಹ ಬೆಳೆಸಿ ಡ್ಯಾನ್ಸ್ ಹೇಳಿಕೊಡುವುದಾಗಿ ತಿಳಿಸಿದ್ದು, ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ.
ಆರಂಭದಲ್ಲಿ ಆತನಿಗೆ ಡ್ಯಾನ್ಸ್ ಹೇಳಿಕೊಟ್ಟಿರುವ ವ್ಯಕ್ತಿ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಾನೆ. ಆತನಿಗೆ ಸ್ವಲ್ಪ ಹಣವನ್ನೂ ನೀಡಿದ್ದನಂತೆ. ಇದಾದ ಬಳಿಕ ತನ್ನೊಂದಿಗೆ ಕೆಲಸ ಮಾಡುವಂತೆ ಒತ್ತಾಯಿಸಿದ್ದಾನೆ. ಬಳಿಕ ಆತನಿಗೆ ಮಾದಕ ವಸ್ತು ನೀಡಲು ಶುರು ಮಾಡಿದ್ದಾನೆ. ಇಷ್ಟೇ ಅಲ್ಲ, ಲಿಂಗ ಪರಿವರ್ತನೆಯನ್ನೂ ಮಾಡಿಸಿದ್ದಾನೆ. ಬಾಲಕ ಹುಡುಗಿಯಾಗಿ ಬದಲಾಗುತ್ತಿದ್ದಂತೆ ಹೊರಗಡೆ ಗಿರಾಕಿಗಳಿಗೆ ದೈಹಿಕವಾಗಿ ಸಹಕರಿಸುವಂತೆ ಪುಸಲಾಯಿಸಿದ್ದಾನೆ. ಇದರಿಂದ ಹಣ ಸಂಪಾದನೆಯಾಗುತ್ತಿತ್ತು. ಮಹಿಳಾ ಆಯೋಗ ಈ ಬಗ್ಗೆ ದೂರು ದಾಖಲಿಸಿದ್ದು ತನಿಖೆ ನಡೆಸಿದಾಗ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಇದೀಗ ಬಾಲಕನನ್ನು ರಕ್ಷಿಸಲಾಗಿದೆ.