ಅಲಿಗಢ/ಮುಂಬೈ: ಅತ್ಯಾಚಾರ ಪ್ರಕರಣಗಳನ್ನು ಮಟ್ಟ ಹಾಕಲು ಕಠಿಣ ಕಾನೂನುಗಳನ್ನು ತಂದರೂ ಬದಲಾವಣೆ ಮಾತ್ರ ಆಮೆಗತಿಯಲ್ಲೇ ಸಾಗುತ್ತಿದೆ. ಮದುವೆಯಲ್ಲಿ ಪಾಲ್ಗೊಂಡಿದ್ದ 12 ವರ್ಷದ ಬಾಲಕಿಯ ಮೇಲೆ ಕೀಚಕರು ಅತ್ಯಾಚಾರವೆಸಗಿ ಪರಾರಿಯಾದ ಘಟನೆ ಉತ್ತರಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಡೆದಿದ್ದರೆ, ಮುಂಬೈನಲ್ಲಿ ಸೋದರಮಾವ ಮತ್ತು ಆತನ ಮಗ 14 ವರ್ಷದ ಬಾಲಕಿಯ ಮೇಲೆ ಪೈಶಾಚಿಕ ಕೃತ್ಯ ಎಸಗಿದ ಘಟನೆ ಬೆಳಕಿಗೆ ಬಂದಿವೆ. ಈ ಬಗ್ಗೆ ದೂರುಗಳು ದಾಖಲಾಗಿವೆ.
ಉತ್ತರ ಪ್ರದೇಶದ ಪ್ರಕರಣ: ಇಲ್ಲಿನ ಮಹುವಖೇರಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದುಷ್ಕೃತ್ಯ ನಡೆದಿದೆ. ಬಾಲಕಿ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಕುಟುಂಬದೊಂದಿಗೆ ಭಾಗವಹಿಸಿದ್ದಳು. ಎಲ್ಲಾ ಅತಿಥಿಗಳು ಮದುವೆಯಲ್ಲಿ ನಿರತರಾಗಿದ್ದಾಗ, ಅಪರಿಚಿತ ಆರೋಪಿಗಳು ಬಾಲಕಿಯನ್ನು ಕೋಣೆಗೆ ಎಳೆದೊಯ್ದು ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ. ಬಳಿಕ ಬಾಲಕಿ ನಡೆದ ಘಟನೆಯನ್ನು ಹೆತ್ತವರಿಗೆ ತಿಳಿಸಿದ್ದಾಳೆ.
ಬಾಲಕಿಯ ಹೇಳಿಕೆಯ ಮೇರೆಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳೀಯ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರೆದಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೆಲವು ಸಾಕ್ಷ್ಯಧಾರಗಳನ್ನೂ ಸಂಗ್ರಹಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಗುಣವತಿ ಅವರು ತಿಳಿಸಿದ್ದಾರೆ.
ಮುಂಬೈನಲ್ಲಿ ನಡೆದ ಪ್ರಕರಣ: ಮುಂಬೈನಲ್ಲಿ ಶ್ರೀರಕ್ಷೆಯಾಗಿರಬೇಕಿದ್ದ ಸೋದರಮಾವ ಮತ್ತು ಆತನ ಮಗ ಸೇರಿ ಇಬ್ಬರೂ 14 ವರ್ಷದ ಬಾಲಕಿಯ ಮೇಲೆ ರಾಕ್ಷಸತನ ತೋರಿದ್ದಾರೆ. ಬೊರಿವಿಲಿ ನಿವಾಸಿಯಾಗಿದ್ದ ಸೋದರಮಾವನ ಮನೆಯಲ್ಲಿ ಬಾಲಕಿ ಉಳಿದುಕೊಂಡಿದ್ದಳು. ಇದನ್ನೇ ಬಳಸಿಕೊಂಡ ಮಾವ ಮತ್ತು ಆತನ ಮಗ ಬಾಲಕಿಯ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದಾರೆ. ಮಾವ ತನ್ನ ಮೇಲೆ ಪದೇ ಪದೆ ಅತ್ಯಾಚಾರ ಎಸಗಿದ್ದರಿಂದ ನೊಂದ ಬಾಲಕಿ ಈ ಬಗ್ಗೆ ಇನ್ನೊಬ್ಬ ಮಾವನಿಗೆ ತಿಳಿಸಿದ್ದಾಳೆ.
ತಕ್ಷಣವೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನಾಲ್ಕೇ ಗಂಟೆಯಲ್ಲಿ ಇಬ್ಬರು ಕೀಚಕರನ್ನು ಪೊಲೀಸರು ಬಂಧಿಸಿದ್ದಾರೆ. ಪೋಕ್ಸೋ ಕಾಯಿದೆ ಮತ್ತು ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಬ್ಬರನ್ನೂ ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ನಲ್ಲಿ ಕಾಮುಕರ ಅಟ್ಟಹಾಸ: ಹೈದರಾಬಾದ್ನಲ್ಲಿ ಅಪ್ರಾಪ್ತೆಯ ಮೇಲೆ ಕಾಮುಕರು ಅಟ್ಟಹಾಸ ಮೆರೆದಿದ್ದ ಘಟನೆ ಈಚೆಗೆ ನಡೆದಿತ್ತು. ಇಲ್ಲಿನ ಚಂದ್ರಾಯನಗುಟ್ಟ ಪ್ರದೇಶದ ಛತ್ರಿನಾಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಗುಂಗಿನಲ್ಲಿದ್ದ ಆರೋಪಿಗಳು 15 ವರ್ಷ ವಯಸ್ಸಿನ ಬಾಲಕಿಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ ಬಳಿಕ ಅತ್ಯಾಚಾರ ಮಾಡಿದ್ದರು.
ಔಷಧಿ ತರಲು ಹೊರಬಂದಿದ್ದ ಬಾಲಕಿ: ಬಾಲಕಿ ಮೆಡಿಕಲ್ ಶಾಪ್ಗೆ ಔಷಧಿ ತರಲು ಹೊರ ಬಂದಿದ್ದಾಗ ಇದನ್ನೇ ಬಳಸಿಕೊಂಡು ಓರ್ವ ಆರೋಪಿ ಕಡಿಮೆ ಬೆಲೆಗೆ ಔಷಧಿ ಕೊಡಿಸುವುದಾಗಿ ಆಕೆಯನ್ನು ಪುಸಲಾಯಿಸಿ ಮನೆಯೊಂದಕ್ಕೆ ಕರೆದೊಯ್ದಿದ್ದಾನೆ. ಆ ಮನೆಯಲ್ಲಿ ಅದಾಗಲೇ ಗಾಂಜಾ ಮತ್ತಿನಲ್ಲಿದ್ದ ಇತರೆ ಮೂವರು ಸೇರಿ ಅತ್ಯಾಚಾರವೆಸಗಿದ್ದರು.
ಕಾಮುಕರ ಕ್ರೌರ್ಯಕ್ಕೆ ನಲುಗಿದ ಬಾಲಕಿ ಹೇಗೋ ಆ ಸ್ಥಳದಿಂದ ತಪ್ಪಿಸಿಕೊಂಡು ಬಂದು, ತಾಯಿಯ ಬಳಿಕ ಹೇಳಿಕೊಂಡಿದ್ದಾಳೆ. ಮಗಳ ಮೇಲೆ ನಡೆದ ದುಷ್ಕೃತ್ಯದ ವಿರುದ್ಧ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರನ್ನೂ ಆಂಧ್ರಪ್ರದೇಶದ ಗುಂಟೂರಿನಲ್ಲಿ ಬಂಧಿಸಿದ್ದರು.
ಇದನ್ನೂ ಓದಿ: ಆಂಬ್ಯುಲೆನ್ಸ್ಗಾಗಿ ಪರದಾಟ: ತಳ್ಳುವ ಗಾಡಿಯಲ್ಲೇ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ದ ಬಾಲಕ