ಜಮ್‌ಶೆಡ್‌ಪುರ್: ಜಮ್‌ಶೆಡ್‌ಪುರದ ಟಾಟಾ ಸ್ಟೀಲ್ ಪ್ಲಾಂಟ್‌ನಲ್ಲಿ 27ವರ್ಷದ ಹಳೆಯ ಚಿಮಣಿಯನ್ನು ಸ್ಫೋಟದ ಮೂಲಕ ನೆಲಸಮ ಮಾಡಲಾಯಿತು. ಚಿಮಣಿಯನ್ನು ಕೆಡವಲು 11ಸೆಕೆಂಡುಗಳನ್ನು ತೆಗೆದುಕೊಂಡಿತು ಎಂದು ಟಾಟಾ ಸ್ಟೀಲ್ ಉಪಾಧ್ಯಕ್ಷ ಅವನೀಶ್ ಗುಪ್ತಾ ಹೇಳಿದರು.
ದಕ್ಷಿಣ ಆಫ್ರಿಕಾದ ಎಡಿಫೈಸ್ ಇಂಜಿನಿಯರಿಂಗ್ ಭಾರತ ಬೆಂಬಲಿತ ವೈಜೆ ಡೆಮಾಲಿಶನ್ ಕಂಪನಿ ನೆರವಿನಿಂದ ಕಾಮಗಾರಿ ಸಂಪೂರ್ಣ ಸುರಕ್ಷಿತವಾಗಿ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಸುಮಾರು ಶತಮಾನಗಳ ಹಿಂದೆ ಜೆಮ್ಶೆಡ್ಪುರ್ನಲ್ಲಿ ಸ್ಥಾಪನೆಯಾದ ಟಾಟಾ ಸ್ಟೀಲ್ ಕಂಪನಿಯು ಕಾಲಾ ಕ್ರಮೇಣ ಪರಿಸರವನ್ನು ಉಳಿಸಲು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದು, ಕಂಪನಿಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗುತ್ತಿದೆ.
ಸ್ಥಾವರದಲ್ಲಿ ಮುಚ್ಚಲಾಗಿದ್ದ 110 ಮೀಟರ್ ಉದ್ದದ ಚಿಮಣಿಯನ್ನು ಭಾನುವಾರ ನಿಯಂತ್ರಿತ ಸ್ಫೋಟದ ಮೂಲಕ 11 ಸೆಕಂಡುಗಳಲ್ಲಿ ಕೆಡುವಲಾಯಿತು. ಇದಕ್ಕೂ ಮುನ್ನ ಯಾವುದೇ ರೀತಿಯಲ್ಲಿ ಹಾನಿಯಾಗಬಾರದೆಂದು ಸುತ್ತಮುತ್ತಲಿನ ಪ್ರದೇಶವನ್ನು ತೆರವುಗೊಳಿಸಿ ಸಂಪೂರ್ಣ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ಕೆಲವು ತಿಂಗಳ ಹಿಂದೆ ನೋಯ್ಡಾದ ಅವಳಿ ಗೋಪುರಗಳನ್ನು ಕೆಡವಲಾಗಿತ್ತು. ಅದೇ ಕಂಪನಿ ಈಗ ಟಾಟಾ ಸ್ಟೀಲ್ನ 110ಮೀಟರ್ ಉದ್ದದ ಚಿಮಣಿಯನ್ನು ಯಶಸ್ವಿಯಾಗಿ ನೆಲಸಮ ಮಾಡಿದೆ ಎಂದು ಟಾಟಾ ಗ್ರೂಪ್ ತಿಳಿಸಿದೆ. ಈ ಬಗ್ಗೆ ಕಂಪನಿಯು ಸಾಕಷ್ಟು ಅಧ್ಯಯನ ಮಾಡಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ಚಿಮಣಿಯನ್ನು ಕೆಡವಲಾಗಿದೆ ಎಂದು ಹೇಳಿದರು.
1995ರಲ್ಲಿ ಚಿಮಣಿ ಸ್ಥಾಪನೆ: ನೂರು ವರ್ಷಕ್ಕೂ ಅಧಿಕ ಇತಿಹಾಸವಿರುವ ಜಮಶೆಡ್ಪುರದ ಟಾಟಾ ಸ್ಟೀಲ್ ಕಂಪನಿ ಈ ಚಿಮಣಿಯನ್ನು1995ರಲ್ಲಿ ನಿರ್ಮಿಸಿತ್ತು. ಈಗ ಇದೇ ಜಾಗದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಟಾಟಾ ಸ್ಟೀಲ್ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ರೈಲು ನಿಲ್ದಾಣದಲ್ಲಿ ಏಕಾಏಕಿ ಕುಸಿದು ಬಿದ್ದ ಪಾದಚಾರಿ ಸೇತುವೆ.. 20 ಮಂದಿಗೆ ಗಾಯ, 8 ಜನರ ಸ್ಥಿತಿ ಗಂಭೀರ