ಜುಮುಯಿ(ಬಿಹಾರ) : ಸಾಧಿಸಬೇಕೆಂಬ ಉತ್ಸಾಹ, ಛಲ, ದಾಹ ನಮ್ಮಲ್ಲಿದ್ದರೆ ಯಾವುದೇ ಅಡೆತಡೆ ಬಂದರೂ, ಅವುಗಳನ್ನ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಅನೇಕ ಉದಾಹರಣೆ ನಮ್ಮ ಕಣ್ಮುಂದೆ ಇದೆ. ಇದೀಗ ಬಿಹಾರದ ಜುಮುಯಿಯಲ್ಲಿ ಅಂತಹ ಮತ್ತೊಂದು ಸ್ಫೂರ್ತಿದಾಯಕ ಘಟನೆ ನಡೆದಿದೆ. ಖೈರಾ ಬ್ಲಾಕ್ನ ಫತೇಪುರ್ ಗ್ರಾಮದ ನಿವಾಸಿ ಸೀಮಾ(ದಿವ್ಯಾಂಗ ವಿದ್ಯಾರ್ಥಿನಿ) ಕಥೆ ನಿಜಕ್ಕೂ ಎಲ್ಲರಿಗೂ ಆಶ್ಚರ್ಯ ಮೂಡಿಸುತ್ತದೆ.
10 ವರ್ಷದ ಅಂಗವಿಕಲ ವಿದ್ಯಾರ್ಥಿನಿ ಸೀಮಾ ಪ್ರತಿದಿನ ಶಾಲೆಗೆ ಹೋಗಲು ಕಿಲೋಮೀಟರ್ ದೂರ ಕ್ರಮಿಸುತ್ತಾರೆ. ಒಂದೇ ಕಾಲಿನಲ್ಲಿ ನಡೆದುಕೊಂಡು ಶಾಲೆಗೆ ಹೋಗುವ ಮೂಲಕ ಇತರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಸೀಮಾ ಗಂಭೀರವಾಗಿ ಗಾಯಗೊಂಡಿದ್ದರು. ಬಾಲಕಿಯ ಜೀವ ಉಳಿಸಲು ವೈದ್ಯರು ಒಂದು ಕಾಲು ಕತ್ತರಿಸಬೇಕಾಯಿತು. ಚೇತರಿಸಿಕೊಂಡ ನಂತರ ಸೀಮಾ ಎಲ್ಲ ಕೆಲಸ ಮಾಡಲು ಪ್ರಾರಂಭ ಮಾಡ್ತಾಳೆ.
ಫತೇಪುರ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡ್ತಿರುವ ವಿದ್ಯಾರ್ಥಿನಿ ಸೀಮಾ, ಒಂದು ಕಾಲಿಲ್ಲದಿದ್ದರೂ ಪ್ರತಿದಿನ ಶಾಲೆಗೆ ಹಾಜರಾಗುತ್ತಾಳೆ. ಯಾರಿಗೂ ಹೊರೆಯಾಗದ ರೀತಿ ಶಿಕ್ಷಣ ಪಡೆದುಕೊಳ್ಳುತ್ತಿದ್ದು, ಶಿಕ್ಷಕಿಯಾಗುವ ಕನಸು ಹೊಂದಿದ್ದಾಳೆ. ಹೀಗಾಗಿ, ಇಷ್ಟೆಲ್ಲ ಕಷ್ಟದ ನಡುವೆ ಶಾಲೆಗೆ ಹೋಗಿ, ತಾನು ಕಂಡಿರುವ ಕನಸು ನನಸು ಮಾಡಿಕೊಳ್ಳುತ್ತಿದ್ದಾಳೆ.
ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಸೀಮಾ ಇತರೆ ಮಕ್ಕಳನ್ನ ನೋಡಿ, ಶಾಲೆಗೆ ಹೋಲು ಹಠ ಹಿಡಿಯುತ್ತಿದ್ದಳು ಎಂದು ಸೀಮಾ ತಾಯಿ ಬೇಬಿ ದೇವಿ ಹೇಳಿಕೊಂಡಿದ್ದಾಳೆ. ಸರ್ಕಾರದ ಸಹಾಯವಿಲ್ಲದೇ ಆಕೆ, ಪ್ರತಿದಿನ ನಡೆದುಕೊಂಡು ಹೋಗುತ್ತಿದ್ದಾಳೆ ಎಂದರು. ಮಗಳಿಗೆ ಪುಸ್ತಕ ಖರೀದಿಸುವಷ್ಟು ಹಣ ನಮ್ಮಲ್ಲಿಲ್ಲ. ಶಾಲೆಯ ಶಿಕ್ಷಕರೇ ಇವುಗಳನ್ನ ಒದಗಿಸುತ್ತಾರೆ.
ಬಾಲಕಿಯ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜಮುಯಿ ಡಿಎಂ ಅವ್ನಿಶ್ ಕುಮಾರ್ ಸಿಂಗ್ ಬಾಲಕಿಗೆ ತ್ರಿಚಕ್ರ ವಾಹನ ಉಡುಗೊರೆಯಾಗಿ ನೀಡಿದ್ದು, ನಟ ಸೋನು ಸೂದ್ ಆರ್ಥಿಕವಾಗಿ ಸಹಾಯ ನೀಡಿದ್ದಾರೆ. ಈ ಬಾಲಕಿಯ ಸ್ಟೋರಿ ಇದೀಗ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.