ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 1.29 ಕೋಟಿ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ. ಇದರಲ್ಲಿ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ 2018 (43,72,491), 2019 (41,52,273) ಮತ್ತು 2020 (8,54,025) ನಲ್ಲಿ ಒಟ್ಟು 93,78,789 ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ.
ಇನ್ನು ಮಹಾರಾಷ್ಟ್ರದಲ್ಲಿ 20,37,947 ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. 2018ರಲ್ಲಿ 12,81,922, 2019ರಲ್ಲಿ 6,53,677 ಮತ್ತು 2020ರಲ್ಲಿ 1,02,348ರಷ್ಟು ರದ್ದು ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಸಾಧ್ವಿ ನಿರಂಜನ್ ಜ್ಯೋತಿ ಲೋಕಸಭೆಗೆ ತಿಳಿಸಿದರು.
ಪಡಿತರ ಚೀಟಿಗಳನ್ನು ರದ್ದುಗೊಳಿಸುವ ಮತ್ತು ಕ್ಯಾನ್ಸಲ್ ಮಾಡಿರುವ ಪಟ್ಟಿಯಲ್ಲಿ ಮಧ್ಯಪ್ರದೇಶ (3,54,535) ನಂತರದ ಸ್ಥಾನದಲ್ಲಿದೆ. ಬಳಿಕ ಹರಿಯಾಣ (2,91,926), ಪಂಜಾಬ್ (2,87,474), ದೆಹಲಿ (2,57,886) ಮತ್ತು ಅಸ್ಸೋಂ (1,70,057) ಇವೆ.
ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ (ಟಿಪಿಡಿಎಸ್) (ನಿಯಂತ್ರಣ) ಆದೇಶ, 2015ರ ನಿಬಂಧನೆಗಳನ್ನು ಉಲ್ಲಂಘಿಸಿ ಮಾಡಿದ ಅಪರಾಧವು ಅಗತ್ಯ ಸರಕುಗಳ ಕಾಯ್ದೆ 1955 ರ ಅಡಿ ದಂಡನೆ ವಿಧಿಸಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು. ಹೀಗಾಗಿ, ಆದೇಶದ ಸಂಬಂಧಿತ ನಿಬಂಧನೆಗಳ ಉಲ್ಲಂಘನೆಯ ಸಂದರ್ಭದಲ್ಲಿ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಎಲ್ಲ ರಾಜ್ಯ / ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳಿಗೆ ಅಧಿಕಾರ ನೀಡುತ್ತದೆ ಎಂದರು.