ಹುಬ್ಬಳ್ಳಿ: ''ನಿರಂತರವಾಗಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಸಂಸದರು ನನ್ನ ಜೊತೆ ಸಂಪರ್ಕದಲ್ಲಿದಾರೆ. ಯಡಿಯೂರಪ್ಪ ಅವರು ನೀವು ಸೀನಿಯರ್ ಇದ್ದೀರಿ ಎಂದಿದ್ದರು'' ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿಂದು ತಮ್ಮ ನಿವಾಸದಲ್ಲಿ ನಡೆದ ಎರಡನೇ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜನಾರ್ದನ ರೆಡ್ಡಿ ಪಕ್ಷಕ್ಕೆ ಹೋಗುವುದಿಲ್ಲ- ಶೆಟ್ಟರ್: ''ಬೇರೆ ಪಕ್ಷದವರೂ ಯಾರೂ ನನ್ನ ಜೊತೆ ಮಾತಾಡಿಲ್ಲ. ಡಿ.ಕೆ.ಶಿವಕುಮಾರ್ ಸೇರಿದಂತೆ ಬೇರೆ ಯಾರೂ ಕೂಡಾ ನನ್ನ ಸಂಪರ್ಕ ಮಾಡಿಲ್ಲ. ನಾನು ಜನಾರ್ದನ ರೆಡ್ಡಿ ಪಕ್ಷಕ್ಕೆ ಹೋಗುವುದಿಲ್ಲ'' ಎಂದರು. ''ನಾನು ಕ್ಲೀಯರ್ ಇದೀನಿ, ಬೇರೆಯವರ ಹೆಸರು ಹೇಳುವುದಿಲ್ಲ. ನಾನೇ ಸ್ಪರ್ಧೆ ಮಾಡುವುದು ಖಚಿತ. ಏನಾದರೂ ಆಗಲಿ ನಾನು ಸ್ಪರ್ಧೆ ಮಾಡ್ತೀನಿ. ಸ್ಪರ್ಧೆಯನ್ನು ಬಿಟ್ಟು ಕೊಡಲ್ಲ'' ಎಂದು ಹೇಳಿದರು.
ಶೆಟ್ಟರ್ಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರ ಪಟ್ಟು: ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಹೈವೋಲ್ಟೇಜ್ ಕಣವಾಗಿ ನಿರ್ಮಾಣವಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಹಾಗೂ ಶೆಟ್ಟರ್ ಬೆಂಬಲಿಗರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಕೇಶ್ವಾಪೂರದಲ್ಲಿರುವ ಜಗದೀಶ್ ಶೆಟ್ಟರ್ ನಿವಾಸದ ಮುಂದೆ ಜಮಾವಣೆಗೊಂಡ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಯಾವುದೇ ಪರಿಸ್ಥಿತಿಯಲ್ಲಿಯೂ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೈ ತಪ್ಪಕೂಡದು. ಒಂದು ವೇಳೆ ಟಿಕೆಟ್ ಕೈ ತಪ್ಪಿದರೆ ಪಕ್ಷಕ್ಕೆ ದೊಡ್ಡಮಟ್ಟದ ಹಿನ್ನಡೆಯಾಗಲಿದೆ ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು. ವಿಷಯ ತಿಳಿಯುತ್ತಿದಂತೆ ಕುಂದಗೋಳ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ, ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಹಲವು ನಾಯಕರು ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಟಿಕೆಟ್ಗಾಗಿ ನಿರಂತರ ಸಭೆ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಚುನಾವಣಾ ಕಾವು ರಂಗೇರುತ್ತಿದೆ. ಈ ನಿಟ್ಟಿನಲ್ಲಿ ಜಗದೀಶ್ ಶೆಟ್ಟರ್ಗೆ ಟಿಕೆಟ್ ಕೊಡಿಸಲು ಜಟಾಪಟಿ ನಡೆದಿದ್ದು, ಸ್ಥಳೀಯ ಮುಖಂಡರು ಶೆಟ್ಟರ್ ಬೆಂಬಲಕ್ಕೆ ನಿಂತಿದ್ದಾರೆ. ಈಗಾಗಲೇ ಮೇಯರ್, ಉಪಮೇಯರ್ ಪಾಲಿಕೆ ಚುನಾಯಿತ ಪ್ರತಿನಿಧಿಗಳು ಶೆಟ್ಟರ್ ಬೆಂಬಲಿಸಿದ್ದು, ಅವರು ಬಯಸಿದ್ರೆ ರಾಜೀನಾಮೆ ನೀಡಲು ಸಿದ್ದ ಎಂದು ಬೆಂಬಲಿಗರು ಅಭಿಪ್ರಾಯ ವ್ಯಕ್ತಪಡಿಸಿದರು. ಬಿಜೆಪಿ ಟಿಕೆಟ್ ಕೈ ತಪ್ಪುವ ಭೀತಿಯಲ್ಲಿಯೇ ಮುಖಂಡರ ಜೊತೆಗೆ ಶೆಟ್ಟರ್ ಸಭೆ ನಡೆಸಿದರು. ಮುಖಂಡರು ಹಾಗೂ ಕಾರ್ಯಕರ್ತರು ನಿರಂತರ ಸಭೆಗಳನ್ನು ನಡೆಸಿದರು.
ನಾನು ರಾಜೀನಾಮೆ ನೀಡಿಲ್ಲ, ಫೆಕ್ ಲೆಟರ್- ಶೆಟ್ಟರ್: ರಾಜೀನಾಮೆ ಕೊಟ್ಟಿದ್ದಾರೆ ಎನ್ನಲಾದ ಪತ್ರ ಕುರಿತಂತೆ ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ. ''ಬಿಜೆಪಿಗೆ ರಾಜೀನಾಮೆ ಕೊಟ್ಟಿದ್ದೇನೆ ಎನ್ನಲಾದ ಪತ್ರವು ನಕಲಿಯಾಗಿದೆ. ನಾನು ರಾಜಿನಾಮೆ ಕೊಟ್ಟಿಲ್ಲ. ಅದು ನಾನು ಬರೆದ ಪತ್ರವಲ್ಲ. ಪತ್ರ ಬರೆಯುವುದಿದ್ದರೆ, ಅದು ಇಂಗ್ಲಿಷ್‌ನಲ್ಲಿ ಇರುತ್ತಿತ್ತು. ಪ್ರೈಮಾಫಸಿ ಪ್ರಕಾರ, ಅದು ಫೇಕ್ ಪತ್ರ ಅನ್ನೋದು ಕಾಣಿಸುತ್ತೆ. ಯಾರೋ ಕುತಂತ್ರದಿಂದ ಹೀಗೆ ಮಾಡಿದ್ದಾರೆ. ನನಗೆ ಈ ಕ್ಷಣದವರೆಗೂ ಟಿಕೆಟ್ ಸಿಗುವ ನಿರೀಕ್ಷೆಯಿದೆ. ನಾಳೆಯವರೆಗೆ ಕಾಯ್ದು ನೋಡೋಣ ಎಂದು ಅವರು ಹೇಳಿದರು.
ಇದನ್ನೂ ಓದಿ: ಬೇರೆಯವರಿಗೆ ಅವಕಾಶ ಮಾಡಿ ಕೊಡಿ ಎಂದ ಹೈಕಮಾಂಡ್ ; ನಾನು ಚುನಾವಣೆಗೆ ನಿಂತೇ ನಿಲ್ಲುತ್ತೇನೆ ಎಂದ ಶೆಟ್ಟರ್