ಶಿವಮೊಗ್ಗ: ''ಏಪ್ರಿಲ್ 9ರಂದು ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ತಿಳಿಸಿದರು. ತೀರ್ಥಹಳ್ಳಿ ತಾಲೂಕು ತೂದೂರು ಗ್ರಾಮದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ನಾಲ್ಕು ಹಂತದದಲ್ಲಿ ಅಭಿಪ್ರಾಯ ಪಡೆದು ಆಯ್ಕೆ ಪ್ರಕ್ರಿಯೆ ನಡೆದಿದೆ. ಕ್ಷೇತ್ರ, ಜಿಲ್ಲಾ ಮಟ್ಟದ ಆಯ್ಕೆಯ ನಂತರ ರಾಜ್ಯ ಮಟ್ಟದ ನಾಯಕರ ಬಳಿ ಪಟ್ಟಿ ಹೋಗಿದೆ. ರಾಜ್ಯದ ಸಮ್ಮತಿಯಿಂದ ಈಗ ಕೇಂದ್ರಕ್ಕೆ ಪಟ್ಟಿ ಹೋಗಿದೆ. ಕೇಂದ್ರದ ಚುನಾವಣಾ ಸಮಿತಿಯವರು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ" ಎಂದು ಹೇಳಿದರು.
ಟಿಕೆಟ್ ಘೋಷಣೆಯಾದ ನಂತರ ಗೊಂದಲ ನಿವಾರಣೆ: ''ನಮ್ಮದು ದೊಡ್ಡ ಪಕ್ಷ. ಇದರಿಂದಾಗಿ ಗೊಂದಲ ಇರುವುದು ಸಹಜ. ಆದರೆ, ಟಿಕೆಟ್ ಘೋಷಣೆಯಾದ ನಂತರ ಗೊಂದಲ ನಿವಾರಣೆ ಆಗುತ್ತದೆ'' ಎಂದು ಸ್ಪಷ್ಟಪಡಿಸಿದುರು. ''ನಮ್ಮ ಪಟ್ಟಿ ಬಿಡುಗಡೆ ವಿಳಂಬವಾಗಿಲ್ಲ. ಪ್ರತಿ ಬಾರಿಯೂ ಹೀಗೆಯೇ ಬಿಡುಗಡೆ ಮಾಡಲಾಗುತ್ತದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಟಿಕೆಟ್ ಘೋಷಣೆ ಮಾಡಿವೆ ಎಂದರೆ, ಅದು ಅವರ ಪಕ್ಷದ ವಿಚಾರವಾಗಿದೆ'' ಎಂದರು.
ಪಕ್ಷದ ಪದ್ಧತಿಯ ಪ್ರಕಾರ ಟಿಕೆಟ್ ಘೋಷಣೆ: ''ವಿರೋಧ ಪಕ್ಷದವರು ಈ ಬಾರಿ ಬೇಗ ಟಿಕೆಟ್ ಘೋಷಣೆ ಮಾಡಿದ್ದಾರೆ. ಏನೇ ಇರಲಿ ನಮ್ಮ ಪಕ್ಷದ ಪದ್ಧತಿಯ ಪ್ರಕಾರ ಟಿಕೆಟ್ ಘೋಷಣೆ ಮಾಡುತ್ತೇವೆ'' ಎಂದು ತಿಳಿಸಿದ ಸಿಎಂ, ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಕುರಿತು ಕೇಳಿದ ಪ್ರಶ್ನೆಗೆ ''ಯಾರ್ ಹಾಗೆ ಹೇಳಿದ್ದು, ಯಾವನು ಹೇಳಿದ್ದು'' ಎಂದು ಗರಂ ಆದರು. ''ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ಚುನಾವಣೆಯು ಆರೋಗ್ಯಕರ ಪೈಪೋಟಿ ಇರಲಿ ಎಂದು ಹೇಳಿದ್ದಾರೆ ಎಂದಾಗ ಶಿವಮೊಗ್ಗದವರು ಬಹಳ ಸೂಕ್ಷ್ಮವಾಗಿರುತ್ತೀರಿ. ನಮ್ಮ ಕಡೆ ಪೈಪೋಟಿ ಜೋರಾಗಿ ಇರುತ್ತದೆ'' ಎಂದರು.
ಇದನ್ನೂ ಓದಿ: 32 ಶಾಸಕರ ವಿರುದ್ಧ ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಮೊಕದ್ದಮೆ: ಎಡಿಆರ್ ವರದಿ