ಹಾಸನ: ಒಂಟಿ ಕಾಡಾನೆ ಸಂಚಾರಕ್ಕೆ ಭಯಭೀತರಾದ ಶಾಲಾ ಮಕ್ಕಳು
Published : Nov 12, 2024, 8:05 PM IST
ಹಾಸನ : ಬೇಲೂರಿನ ಕೋಡಿಮಠ ಶಾಲಾ ಆವರಣದಲ್ಲಿ ಕಾಡಾನೆಯೊಂದು ಸಂಚಾರ ಮಾಡುವ ಮೂಲಕ ಆಡಳಿತ ಮಂಡಳಿ, ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಭಯದ ವಾತಾವರಣ ಸೃಷ್ಟಿ ಮಾಡಿದೆ.
ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದ ಶ್ರೀ ಕೋಡಿಮಠ ವಿದ್ಯಾಸಂಸ್ಥೆಯ ಆವರಣ ಹಾಗೂ ಪಕ್ಕದ ಕಾಫಿ ತೋಟದಲ್ಲಿ ಓಡಾಟ ನಡೆಸುವ ಮೂಲಕ ಮತ್ತಷ್ಟು ಆತಂಕ ಹೆಚ್ಚಿಸಿದೆ. ಇಂದು ಬೆಳಗ್ಗೆ ಒಂಟಿ ಸಲಗ ಕಾಫಿ ತೋಟದಿಂದ ಶಾಲಾ ಆವರಣ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ತನ್ನ ಗಜ ಗಾಂಭೀರ್ಯದ ನಡೆಯಿಂದ ಓಡಾಟ ನಡೆಸಿದೆ. ಇದರಿಂದ ಮಕ್ಕಳು ಶಾಲೆಗೆ ಆಗಮಿಸಲು ಹಿಂದೇಟು ಹಾಕಿದ್ದಾರೆ.
ಈಗಾಗಲೇ ಬೇಲೂರು ತಾಲೂಕಿನಲ್ಲಿ ಸುಮಾರು ನಾಲ್ಕು ಮಂದಿಯನ್ನು ಬಲಿ ತೆಗೆದುಕೊಂಡಿರುವ ಕಾಡಾನೆಯನ್ನ ಕಳೆದ ಎರಡು ತಿಂಗಳ ಹಿಂದೆ ಸೆರೆ ಹಿಡಿಯುವ ಮೂಲಕ, ಮತ್ತಿಗೋಡು ಆನೆ ಶಿಬಿರಕ್ಕೆ ಕಳುಹಿಸಲಾಗಿತ್ತು.
ಹಾಸನ ಜಿಲ್ಲೆಯ ಸಕಲೇಶಪುರದ ಆಲೂರು ಮತ್ತು ಬೇಲೂರು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಈಗ ಒಂಟಿ ಕಾಡಾನೆ ಶಾಲೆಯ ಸುತ್ತಮುತ್ತ ಓಡಾಡಿರುವುದರಿಂದ ಸ್ಥಳೀಯರು ಭಯಬೀತರಾಗಿದ್ದಾರೆ. ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಕೂಡಲೇ ಈ ಆನೆ ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ : ಕಾಡಾನೆಗಳ ಉಪಟಳ: ಚಿಕ್ಕಮಗಳೂರಿನ ಹತ್ತಾರು ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಡಳಿತ ಆದೇಶ