LIVE: ಲೋಕಸಭೆ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ: ಲೋಕಸಭಾ ಅಧಿವೇಶನದ ನೇರ ಪ್ರಸಾರ - Lok Sabha Live - LOK SABHA LIVE
Published : Jun 26, 2024, 11:06 AM IST
|Updated : Jun 26, 2024, 1:18 PM IST
ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನದ ಮೂರನೇ ದಿನವಾದ ಇಂದು ಬೆಳಗ್ಗೆ 11 ಗಂಟೆಗೆ ಮಹತ್ವದ ಲೋಕಸಭೆ ಸ್ಪೀಕರ್ ಚುನಾವಣೆ ನಡೆಯಿತು. ಓಂ ಬಿರ್ಲಾ ಅವರು ನೂತನ ಸ್ಪೀಕರ್ ಆಗಿ ಧ್ವನಿಮತದ ಮೂಲಕ ಆಯ್ಕೆ ಆಗಿದ್ದಾರೆ. ಆಡಳಿತಾರೂಢ ಎನ್ಡಿಎ ಹಾಗೂ ಪ್ರತಿಪಕ್ಷ 'ಇಂಡಿಯಾ' ಮೈತ್ರಿಕೂಟ ನಡುವೆ ಸ್ಪೀಕರ್ ಆಯ್ಕೆಗೆ ಒಮ್ಮತ ಏರ್ಪಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸ್ಪೀಕರ್ ಹುದ್ದೆಗೆ ಬಿಜೆಪಿ ಸಂಸದ, ಮಾಜಿ ಸ್ಪೀಕರ್ ಓಂ ಬಿರ್ಲಾ ಹಾಗೂ ಕಾಂಗ್ರೆಸ್ ಸಂಸದ ಕೆ.ಸುರೇಶ್ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ-ತಮ್ಮ ಸಂಸದರಿಗೆ ಬುಧವಾರ ಸದನಕ್ಕೆ ಹಾಜರಾಗುವಂತೆ ಮೂರು ಸಾಲಿನ ವಿಪ್ ಜಾರಿಗೊಳಿಸಿದ್ದವು.ಲೋಕಸಭೆಯಲ್ಲಿ ಎನ್‌ಡಿಎಯ 293 ಸಂಸದರ ಬೆಂಬಲವನ್ನು ಹೊಂದಿದೆ. ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟವು 233 ಸಂಸದರ ಬೆಂಬಲ ಹೊಂದಿದೆ. ಜೊತೆಗೆ ಮೂರು ಸ್ವತಂತ್ರ ಸದಸ್ಯರ ಬೆಂಬಲವನ್ನೂ ಪ್ರತಿಪಕ್ಷಗಳು ಹೊಂದಿವೆ. ಇದೇ ವೇಳೆ, ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಲ್ವರು ಸದಸ್ಯರ ಬೆಂಬಲವನ್ನು ಎನ್ಡಿಎ ನಿರೀಕ್ಷೆ ಮಾಡಿತ್ತು. ಮಂಗಳವಾರ ಲೋಕಸಭೆಯ ಪ್ರತಿಪಕ್ಷದ ನಾಯಕರಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ 'ಇಂಡಿಯಾ' ಮೈತ್ರಿಕೂಟದ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ.
Last Updated : Jun 26, 2024, 1:18 PM IST