ನವದೆಹಲಿ:2023 ರಲ್ಲಿ ಭಾರತದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ದಾಖಲೆಯ 126 ಮಿಲಿಯನ್ ಡಾಲರ್ ಫಂಡಿಂಗ್ ಹರಿದು ಬಂದಿದೆ. ಇದು 2022 ರಲ್ಲಿ ಆಗಿದ್ದ 118 ಮಿಲಿಯನ್ ಡಾಲರ್ ಫಂಡಿಂಗ್ಗಿಂತ ಶೇಕಡಾ 7 ರಷ್ಟು ಹೆಚ್ಚಾಗಿದೆ ಮತ್ತು 2021 ರಲ್ಲಿ ಆಗಿದ್ದ 37.6 ಮಿಲಿಯನ್ ಡಾಲರ್ಗೆ ಹೋಲಿಸಿದರೆ ಶೇಕಡಾ 235 ರಷ್ಟು ಹೆಚ್ಚಾಗಿದೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ. 2024 ರಲ್ಲಿ ಈವರೆಗೆ ಈ ವಲಯಕ್ಕೆ 10.8 ಮಿಲಿಯನ್ ಡಾಲರ್ ಫಂಡಿಂಗ್ ಸಿಕ್ಕಿದೆ.
ಜಾಗತಿಕವಾಗಿ ಒಟ್ಟಾರೆ ಫಂಡಿಂಗ್ ಮಂದಗತಿಯಲ್ಲಿದ್ದರೂ, ಸರ್ಕಾರದ ಬೆಂಬಲ ಮತ್ತು ಗಮನಾರ್ಹ ಆವಿಷ್ಕಾರಗಳಿಂದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ಫಂಡಿಂಗ್ ಪ್ರಮಾಣ ಹೆಚ್ಚಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ಟ್ರಾಕ್ಸ್ ಎನ್ ಒದಗಿಸಿದ ಅಂಕಿ - ಅಂಶಗಳು ತಿಳಿಸಿವೆ.
ಸದ್ಯ ಭಾರತದಲ್ಲಿ 100 ಕ್ಕೂ ಹೆಚ್ಚು ಸ್ಪೇಸ್ ಟೆಕ್ ಸ್ಟಾರ್ಟ್ಅಪ್ಗಳಿವೆ. ಇವುಗಳಲ್ಲಿ ಹೆಚ್ಚಿನ ಸ್ಟಾರ್ಟ್ ಅಪ್ಗಳು ಕಳೆದ 5 ವರ್ಷಗಳಲ್ಲಿ ಆರಂಭವಾಗಿವೆ. ಬಾಹ್ಯಾಕಾಶ ತಂತ್ರಜ್ಞಾನ ವಲಯಕ್ಕೆ ಈ ಬಾರಿಯ ಕೇಂದ್ರ ಬಜೆಟ್ನಲ್ಲಿ 1,000 ಕೋಟಿ ರೂ.ಗಳ ಅನುದಾನ ಮೀಸಲಿಟ್ಟಿರುವುದರಿಂದ ಈ ಉದ್ಯಮಕ್ಕೆ ಗಮನಾರ್ಹ ಉತ್ತೇಜನ ಸಿಗುವ ನಿರೀಕ್ಷೆಯಿದೆ. ಪ್ರಸ್ತುತ ದೇಶವು ಸಂವಹನ, ಹವಾಮಾನ ಮತ್ತು ಭೂ ವೀಕ್ಷಣಾ ಉಪಗ್ರಹಗಳು ಸೇರಿದಂತೆ 55 ಸಕ್ರಿಯ ಬಾಹ್ಯಾಕಾಶ ಸ್ವತ್ತುಗಳನ್ನು ಹೊಂದಿದೆ.
"ಪ್ರಸ್ತುತ ಭಾರತದ ಬಾಹ್ಯಾಕಾಶ ತಂತ್ರಜ್ಞಾನ ವಲಯಕ್ಕೆ ಹರಿದು ಬರುತ್ತಿರುವ ಧನಸಹಾಯ ಮತ್ತು ಕಾರ್ಯತಂತ್ರದ ಹೂಡಿಕೆಗಳು ಭಾರತವು ಜಾಗತಿಕ ಬಾಹ್ಯಾಕಾಶ ಉದ್ಯಮದಲ್ಲಿ ಪ್ರಮುಖ ದೇಶವಾಗುವತ್ತ ಮುನ್ನಡೆಯುತ್ತಿದೆ" ಎಂದು ಟ್ರಾಕ್ಸ್ ಎನ್ ಸಹ ಸಂಸ್ಥಾಪಕಿ ನೇಹಾ ಸಿಂಗ್ ಹೇಳಿದರು.