ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಧಾರವಾಡದ ಕಸದ ಬೆಟ್ಟಗಳಿಗೆ ಕೊನೆಗೂ ಮುಕ್ತಿ: ಬಯೋ ಮೈನಿಂಗ್ ಮೂಲಕ ತ್ಯಾಜ್ಯ ಕರಗಿಸುವ ಕೆಲಸ ಶುರು - WASTE MANAGEMENT

ಹುಬ್ಬಳ್ಳಿ-ಧಾರವಾಡದಲ್ಲಿ ಸಂಗ್ರಹವಾಗಿರುವ 4.8 ಲಕ್ಷ ಟನ್ ಪಾರಂಪರಿಕ ತ್ಯಾಜ್ಯವನ್ನು ಬಯೋ ಮೈನಿಂಗ್​ ಮೂಲಕ ಸಂಸ್ಕರಿಸುವ ಕಾರ್ಯಕ್ಕೆ ಹುಬ್ಬಳ್ಳಿ- ಧಾರವಾಡ ಪಾಲಿಕೆ ನಾಂದಿ ಹಾಡಿದೆ. 'ಈಟಿವಿ ಭಾರತ್' ಪ್ರತಿನಿಧಿ ಹೆಚ್‌.ಬಿ.ಗಡ್ಡದ ವಿಶೇಷ ವರದಿ.

Work begins on melting huge waste mountains through bio-mining in Hubballi and Dharwad
ಬಯೋ ಮೈನಿಂಗ್ ಮೂಲಕ ತ್ಯಾಜ್ಯದ ಸಂಸ್ಕರಣೆ (ETV Bharat)

By ETV Bharat Karnataka Team

Published : Dec 10, 2024, 2:56 PM IST

Updated : Dec 10, 2024, 3:02 PM IST

ಹುಬ್ಬಳ್ಳಿ:ಇತ್ತ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಬೆಳೆಯುತ್ತಿದ್ದಂತೆ ಅತ್ತ ಜಿಲ್ಲೆಯಲ್ಲಿ ನಿತ್ಯವೂ ಕಸದ ರಾಶಿ ಬೆಳೆಯುತ್ತಾ ಬೆಟ್ಟದಂತಾಗುತ್ತಿದೆ. ಕಳೆದ 50 ವರ್ಷಗಳಿಗೂ ಹೆಚ್ಚು ಕಾಲದಿಂದ ಸಂಗ್ರಹವಾಗುತ್ತಿದ್ದ ಕಸದ ರಾಶಿ ಅಕ್ಷರಶಃ ಬೆಟ್ಟದಂತಾಗಿದೆ. ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿನ 19 ಎಕರೆ ಪ್ರದೇಶದಲ್ಲಿ ಹಾಗೂ ಧಾರವಾಡದ ಹೊಸ ಯಲ್ಲಾಪುರದಲ್ಲಿನ 16 ಎಕರೆ ಪ್ರದೇಶದಲ್ಲಿ ಕಸದ ಬೆಟ್ಟಗಳೇ ತಲೆ ಎತ್ತಿದೆ. ಇದೀಗ ಪಾಲಿಕೆ ವತಿಯಿಂದ ಈ ಬೆಟ್ಟಗಳನ್ನು ಕರಗಿಸುವ ಕಾರ್ಯ ಪ್ರಾರಂಭವಾಗಿದೆ.

ಪ್ರತಿದಿನ ಕಸದ ಬೆಟ್ಟದೊಳಗೆ ಬೆಂಕಿ ಹತ್ತುತ್ತಿದೆ. ದಟ್ಟ ಹೊಗೆ, ಸತ್ತ ನಾಯಿ, ಹಂದಿ, ದನಗಳ ಕಳೇಬರದ ದುರ್ನಾತ ಜನರನ್ನು ಹೈರಾಣಾಗಿಸಿದೆ. ಪರಿಸರ ಸಂಪೂರ್ಣ ಹದಗೆಟ್ಟು ಸುತ್ತಮುತ್ತಲ 2ರಿಂದ 3 ಕಿಲೋ ಮೀಟರ್ ವ್ಯಾಪ್ತಿಯವರೆಗೂ ದುರ್ನಾತ ಬೀರುತ್ತಿದೆ. ಕಸದ ರಾಶಿ ಸಾಂಕ್ರಾಮಿಕ ರೋಗಗಳ ತಾಣವೂ ಆಗಿದೆ. ಕಸದ ಬೆಟ್ಟ ಕರಗಿಸುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2017ರಲ್ಲೇ ಸೂಚನೆ ನೀಡಿತ್ತು.‌

ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಹೇಳಿಕೆ (ETV Bharat)

ಕಸದ ಬೆಟ್ಟ ಕರಗಿಸುವ ಕುರಿತು 2021ರಲ್ಲಿ ಡಿಪಿಆರ್ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಪಾಲಿಕೆ ಕಳುಹಿಸಿತ್ತು. ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು 2023ರಲ್ಲಿ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು 2024ರ ಏಪ್ರಿಲ್​ನಲ್ಲಿ. ಮಳೆಗಾಲ ಇದ್ದುದರಿಂದ ಕೆಲಸ ಶುರುವಾಗಿರಲಿಲ್ಲ. ಹಾಗಾಗಿ ಅ.15ರಿಂದ ಕೆಲಸ ಶುರುವಾಗಿದೆ.

ಹುಬ್ಬಳ್ಳಿ ಧಾರವಾಡದ ಕಸದ ರಾಶಿ (ETV Bharat)

ಬಯೋ ಮೈನಿಂಗ್ ಮೂಲಕ ಕಸದ ರಾಶಿಯನ್ನು ಸ್ಟ್ರಾ ಬೇಜ್ ಮಾಡಲಾಗುತ್ತಿದೆ. ಬಳಿಕ ಅದರಲ್ಲಿನ ಬಯೋ ಅರ್ಥ್ ಅಥವಾ ಬಯೋ ಸ್ವಾಯಿಲ್ (ಮಣ್ಣು) ಅನ್ನು ಗಾರ್ಡನ್ ಸೇರಿದಂತೆ ವಿವಿಧೆಡೆ ಉಪಯೋಗಿಸಬಹುದು. ಬಳಿಕ ಆರ್‌ಡಿಎಫ್ (ರಿವ್ಯೂಸ್ ಡಿರೈವ್ಡ್​ ಫ್ಯುಯಲ್) ರಟ್ಟು, ಕಾಗದ, ಚಪ್ಪಲಿ, ಟೈರ್ ಸೇರಿದಂತೆ ಮತ್ತಿತರರ ವಸ್ತುಗಳು ಬೇರ್ಪಟ್ಟು ಬಂದಿರುವ ರಾಶಿಯನ್ನು ಸಿಮೆಂಟ್ ಫ್ಯಾಕ್ಟರಿ ಸೇರಿದಂತೆ ಮತ್ತಿತರೆಡೆ ಉರುವಲುಗಳಂತೆ ಬಳಸಬಹುದು. ಇದರಲ್ಲಿ ಬರುವ ಇನರ್ಟ್ ಯಾವುದಕ್ಕೂ ಉಪಯೋಗಕ್ಕೆ ಬಾರದ ವಸ್ತು. ಇದನ್ನು ಬರೀ ಕ್ವಾರಿ ಸೇರಿದಂತೆ ತಗ್ಗುಗಳನ್ನು ತುಂಬಲು ಮಾತ್ರ ಉಪಯೋಗಿಸಬಹುದು.

ಹುಬ್ಬಳ್ಳಿ ಧಾರವಾಡದ ಕಸದ ರಾಶಿ (ETV Bharat)

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, "ಹುಬ್ಬಳ್ಳಿ-ಧಾರವಾಡದಲ್ಲಿ ಸಂಗ್ರಹವಾಗಿರುವ ಪಾರಂಪರಿಕ ತ್ಯಾಜ್ಯ 4.8 ಲಕ್ಷ ಟನ್ ಇದೆ. ಹುಬ್ಬಳ್ಳಿಯಲ್ಲಿ 3.6 ಲಕ್ಷ ಟನ್, ಧಾರವಾಡದಲ್ಲಿ 1.2 ಲಕ್ಷ ಟನ್ ತ್ಯಾಜ್ಯವನ್ನು ಸಂಸ್ಕರಣೆ ‌ಮಾಡಲು ಸರ್ಕಾರದಿಂದ 30 ಕೋಟಿ ರೂ ಅನುದಾನ ಮೀಸಲಿಡಲಾಗಿದೆ. ಸಂಸ್ಕರಣೆ ಮಾಡಲು ಟೆಂಡರ್ ನೀಡಲಾಗಿದೆ. ವೈಜ್ಞಾನಿಕವಾಗಿ ಪ್ರತಿದಿನ 1,100 ಟನ್ ಸಂಸ್ಕರಣೆ ಮಾಡಲಾಗುತ್ತಿದೆ. ಮೂರು ವಿಭಾಗದಲ್ಲಿ ಬೇರ್ಪಡಿಸಲಾಗುತ್ತದೆ. ಹುಬ್ಬಳ್ಳಿಯ ಕಾರವಾರ ರಸ್ತೆಯ 19 ಎಕರೆ ಹಾಗೂ ಧಾರವಾಡದ ಹೊಸ ಯಲ್ಲಾಪುರದ 16 ಎಕರೆಯ ಕಸವನ್ನು ಬಯೋ ಮೈನಿಂಗ್ ‌ಮಾಡಲು 18 ತಿಂಗಳ ಕಾಲಾವಕಾಶ ನೀಡಲಾಗಿದೆ" ಎಂದು ತಿಳಿಸಿದರು.

ಹುಬ್ಬಳ್ಳಿ ಧಾರವಾಡದ ಕಸದ ರಾಶಿ (ETV Bharat)

ಬಯೋ ಮೈನಿಂಗ್‌ ಎಂದರೇನು?: ಬಯೋ ಮೈನಿಂಗ್ ಎಂದರೆ ಜೈವಿಕ ಗಣಿಗಾರಿಕೆ ಎಂದರ್ಥ. ಸಾಮಾನ್ಯವಾಗಿ ಮಿಶ್ರ ತ್ಯಾಜ್ಯಗಳನ್ನು, ಜೈವಿಕ ವಿಘಟನೀಯ ಮತ್ತು ಜೈವಿಕ ವಿಘಟನೀಯವಲ್ಲದ ಕಸವನ್ನು ಡಂಪ್ ಯಾರ್ಡ್​ನಲ್ಲಿ ಸುರಿಯಲಾಗುತ್ತದೆ. ಯಂತ್ರಗಳ ಸಹಾಯದಿಂದ ಕಸದ ರಾಶಿಯನ್ನು ಅಗೆಯುವುದು. ಕಸವನ್ನು ಜೈವಿಕ ಜೀವಿಗಳು ಅಥವಾ ನೈಸರ್ಗಿಕ ಅಂಶಗಳಾದ ಗಾಳಿ ಮತ್ತು ಸೂರ್ಯನ ಬೆಳಕಿನಿಂದ ಸಂಸ್ಕರಿಸುವ ಮೂಲಕ ತ್ಯಾಜ್ಯದಲ್ಲಿನ ಜೈವಿಕ ವಿಘಟನೆಯ ಅಂಶಗಳು ಕಾಲಾನಂತರದಲ್ಲಿ ಒಡೆಯುತ್ತವೆ. ಇದನ್ನು ಬಯೋ ರೆಮಿಡಿಯೇಶನ್ ಮೂಲಕ ಸ್ಥಿರಗೊಳಿಸುವುದು (ಬಯೋರೆಮಿಡಿಯೇಶನ್ ಎನ್ನುವುದು ನೀರು, ಮಣ್ಣು ಮತ್ತು ಭೂಗರ್ಭದ ವಸ್ತುಗಳನ್ನು ಒಳಗೊಂಡಂತೆ ಕಲುಷಿತ ಮಾಧ್ಯಮಕ್ಕೆ ಈ ಚಿಕಿತ್ಸೆ ನೀಡಲು ಬಳಸುವ ಪ್ರಕ್ರಿಯೆ) ಅಗೆದ ತ್ಯಾಜ್ಯವನ್ನು ಬೇರ್ಪಡಿಸುವುದು. ಇಂದೋರ್‌ನಲ್ಲಿ ಈ ಬಗೆಯ ವೈಜ್ಞಾನಿಕ ರೀತಿ ಅಳವಡಿಸಿಕೊಂಡು 15 ಲಕ್ಷ ಮೆಟ್ರಿಕ್ ಟನ್ ತ್ಯಾಜ್ಯವನ್ನು ಸ್ವಚ್ಛಗೊಳಿಸಲಾಗಿತ್ತು.

ಹುಬ್ಬಳ್ಳಿ ಧಾರವಾಡದ ಕಸದ ರಾಶಿ (ETV Bharat)

ಹುಬ್ಬಳ್ಳಿ-ಧಾರವಾಡದಲ್ಲಿ ಕಸದ ಬೆಟ್ಟ ಕರಗಿಸಲು ಬಯೋ ಮೈನಿಂಗ್ ಶುರುವಾಗಿದೆ. ಸೂರತ್‌ನ ಡಿ.ಎಚ್.ಪಟೇಲ್ ಎಂಬ ಏಜೆನ್ಸಿ ಗುತ್ತಿಗೆ ಪಡೆದಿದೆ. 2025ರೊಳಗೆ ಮೈನಿಂಗ್ ಪೂರ್ಣವಾಗಲಿದೆ.

ಇದನ್ನೂ ಓದಿ:ಹು-ಧಾ ಸ್ವಚ್ಛತೆಗೆ ಮುಂದಾದ ಪಾಲಿಕೆ; ವ್ಯಾಕ್ಯೂಮ್ ಗಾರ್ಬೇಜ್ ಸಕ್ಷನ್ ಮಷಿನ್​ಗಳಿಂದ ಕಸ ತೆಗೆವ ಕಾರ್ಯ

Last Updated : Dec 10, 2024, 3:02 PM IST

ABOUT THE AUTHOR

...view details