ನಿಖಿಲ್ ಕುಮಾರಸ್ವಾಮಿ ಹೇಳಿಕೆ (ETV Bharat) ರಾಮನಗರ:ಚನ್ನಪಟ್ಟಣ ಜೆಡಿಎಸ್ ಘಟಕದ ವತಿಯಿಂದ ಸಭೆ ಮಾಡಿ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಬಗ್ಗೆ ಸ್ಥಳೀಯ ನಾಯಕರು ಚರ್ಚೆ ಮಾಡಿರೋದು ಗಮನಕ್ಕೆ ಬಂದಿದೆ. ಆದರೆ, ಈ ಬಗ್ಗೆ ಅಂತಿಮ ನಿರ್ಧಾರ ಆಗಬೇಕಿರೋದು ದೆಹಲಿಯಲ್ಲಿ. ಕಾರಣ ನಾವು ಎನ್ಡಿಎ ಮೈತ್ರಿಕೂಟದ ಒಂದು ಭಾಗ ಎಂದು ಚನ್ನಪಟ್ಟದ ಉಪಚುನಾವಣೆಯ ಸ್ಪರ್ದೆ ವಿಚಾರವಾಗಿ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಮನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ಈಗಾಗಲೇ ಸಿಪಿವೈ ಅವರು ಬೆಂಬಲಿಗರ ಪಡೆ ಇಟ್ಟುಕೊಂಡು ಕೆಲಸ ಮಾಡಿದ್ದಾರೆ. ಆದರೆ, ಕುಮಾರಸ್ವಾಮಿ ಅವರು ಅಲ್ಲಿ ಎರಡು ಬಾರಿ ಗೆದ್ದಿದ್ದಾರೆ. ಹಾಗಾಗಿ ಸಾಮಾನ್ಯವಾಗಿ ಜೆಡಿಎಸ್ಗೆ ಉಳಿಸಿಕೊಳ್ಳಬೇಕು ಎಂಬುದು ಸ್ಥಳೀಯ ಮುಖಂಡರು ಅಭಿಪ್ರಾಯವಾಗಿದೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ತೀರ್ಮಾನ ಆಗುತ್ತದೆ ಎಂದರು.
ನನಗೆ ನನ್ನದೇ ಆದ ಜವಾಬ್ದಾರಿ ಇದ್ದು, ಮುಂದಿನ ನಾಲ್ಕು ವರ್ಷ ಪಕ್ಷವನ್ನ ತಳಮಟ್ಟದಿಂದ ಸಂಘಟನೆ ಮಾಡಬೇಕು. ಮುಂದಿನ ನಾಲ್ಕು ವರ್ಷ ಇಡೀ ರಾಜ್ಯ ಪ್ರವಾಸ ಮಾಡುತ್ತೇನೆ. ಹಾಗಾಗಿ ಪಕ್ಷಕಟ್ಟುವ ಕೆಲಸ ಮಾಡಬೇಕಿದ್ದು, ಒಂದು ವೇಳೆ ರಾಷ್ಟ್ರೀಯ ನಾಯಕರು ಸೂಚನೆ ನೀಡಿದರೆ ಕೂತು ಚರ್ಚೆ ಮಾಡುತ್ತೇನೆ ಎಂದು ಪರೋಕ್ಷವಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಹೆಚ್ಡಿಕೆಗೆ ಸರ್ವಪಕ್ಷ ಸಭೆಗಿಂತ ಬಾಡೂಟವೇ ಹೆಚ್ಚು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಮಂಡ್ಯದಲ್ಲಿ ಕುಮಾರಣ್ಣನ ಜನತಾ ದರ್ಶನ ಕಾರ್ಯಕ್ರಮಕ್ಕೆ ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತಿದ್ದರು. ಅಧಿಕಾರಿಗಳನ್ನ ಕಳುಹಿಸದೇ ಆದೇಶ ಮಾಡಿದ್ದು ಇದೇ ರಾಜ್ಯ ನಾಯಕರು. ರಾಜ್ಯ ಮತ್ತು ಕೇಂದ್ರ ಪರಸ್ಪರ ಬಾಂಧವ್ಯ ಇಟ್ಟುಕೊಂಡು ಕೆಲಸ ಮಾಡಬೇಕು. ಆದರೆ, ರಾಜ್ಯ ಸರ್ಕಾರದ ವರ್ತನೆ ಹೇಗಿದೆ ಅಂತ ಎಲ್ಲರಿಗೂ ಗೊತ್ತಾಗಿದೆ. ಈ ಸರ್ಕಾರ ಸಲಹೆ ಸೂಚನೆ ತೆಗೆದುಕೊಳ್ಳುವ ಮಟ್ಟಕ್ಕೆ ಇಲ್ಲ. ಸಲಹೆ ಪಡೆಯಲು ಇವರು ರೆಡಿ ಇಲ್ಲ ಎಂದು ಸಿಎಂ ಹಾಗೂ ಡಿಸಿಎಂ ವಿರುದ್ಧ ಕಿಡಿ ಕಾರಿದರು.
ಡಿಸಿಎಂ ಶಿವಕುಮಾರ್ಗೆ ಬಹಿರಂಗ ಸವಾಲ್:ಹೆಚ್ಡಿಕೆಗೆ ಡಿಕೆಶಿ ಬಹಿರಂಗ ಸವಾಲ್ ಹಾಕಿರೋ ವಿಚಾರವಾಗಿ ಮಾತನಾಡಿ, ಇಂತಹ ಸವಾಲುಗಳನ್ನು ಸಾಕಷ್ಟು ನೋಡಿದ್ದಾರೆ. ಸವಾಲ್ಗಳಿಗೆ ಹೆದರಿ ಓಡುವ ಪ್ರಶ್ನೆ ಇಲ್ಲ. ಸವಾಲುಗಳನ್ನು ಎದುರಿಸೇ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶದಿಂದ ಡಿಸಿಎಂ ಹತಾಶರಾಗಿದ್ದಾರೆ ಎಂದರು.
ಡಿಸಿಎಂ ಅವರಿಗೆ ಒಂದು ಪ್ರಶ್ನೆ ಕೇಳ್ತೀನಿ. ಕೇವಲ ಒಂದು ಸೋಲಿಗೆ ಇಷ್ಟೊಂದು ಹತಾಶರಾದರೆ ಹೇಗೆ?. ನನ್ನನ್ನ ಎರಡು ಬಾರಿ ಜೊತೆಯಲ್ಲೇ ಇದ್ದು ಸೋಲಿಸಿದ್ರಿ. ಜೊತೆಯಲ್ಲೇ ಇದ್ದು ಕುತ್ತಿಗೆ ಕುಯ್ದಿದ್ದೀರಿ.! ನೀವು ಕುಮಾರಸ್ವಾಮಿ ಅವರನ್ನ ನೆನಪಿಸಿಕೊಳ್ಳಬೇಕು. 2019ರ ಚುನಾವಣೆಯಲ್ಲಿ ನಿಮಗೆ ಸಂಪೂರ್ಣ ಸಹಕಾರ ಕೊಟ್ಟಿದ್ದರು. ನಿಮ್ಮ ಸಹೋದರರನ್ನ ಗೆಲ್ಲಿಸಲು ನಾವು ಹೇಗೆ ನಡೆದುಕೊಂಡೆವು ಅದನ್ನ ನೆನಪಿಸಿಕೊಳ್ಳಿ ಎಂದು ಇದೇ ವೇಳೆ ಡಿಸಿಎಂ ಡಿಕೆಶಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಓದಿ:ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಬೇಕು: ಜೆಡಿಎಸ್ ತಾಲೂಕು ಅಧ್ಯಕ್ಷ - Channapatna by election